ಕೊಲ್ಕತ್ತ, ಜೂನ್ 7: ಕಳೆದ ಲೋಕಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈಗಾಗಲೇ ವಿವಿಧ ಪಕ್ಷಗಳು ಪ್ರಚಾರ ತಂತ್ರಗಳನ್ನು ಹೆಣೆಯುತ್ತಿದೆ.
2021ರ ಮೇ ತಿಂಗಳಿಗೆ ವಿಧಾನಸಭಾ ಅವಧಿಯು ಪೂರ್ಣಗೊಳ್ಳಲಿದ್ದು, ಮತ್ತೆ ಪುನಃ ಚುನಾವಣೆ ನಡೆಯಲಿದೆ.
ಈಗಾಗಲೇ ಬಿಜೆಪಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ‘ಆರ್ ನೋಯಿ ಮಮತಾ’ (ಅಂದರೆ ಇನ್ನು ಮಮತಾ ಬೇಕಿಲ್ಲ ) ಎಂಬ ಅಭಿಯಾನವನ್ನು ಆರಂಭಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆಯೇ ಪೈಪೋಟಿ ಇದ್ದು, ಎಡ ಹಾಗೂ ಕಾಂಗ್ರೆಸ್ ಪಕ್ಷ ಇಲ್ಲಿ ಲೆಕ್ಕಕ್ಕೆ ಮಾತ್ರ ಸೀಮಿತವಾಗಿದೆ.

ಹೀಗಾಗಿ ಮೂರನೇ ಬಾರಿಯೂ ಅಧಿಕಾರ ಹಿಡಿಯುವ ಧಾವಂತದಲ್ಲಿರುವ ಮಮತಾ ಬ್ಯಾನರ್ಜಿ ಜಿಲ್ಲಾ ಹಾಗೂ ವಿವಿಧ ಘಟಕಗಳ ಪಕ್ಷದ ಮುಖಂಡರ ಸಭೆ ನಡೆಸಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಜನರು ಕೊರೊನಾ ಅಂಫಾನ್ ಚಂಡಮಾರುತ ಮುಂತಾದ ಕಾರಣದಿಂದಾಗಿ ಸಂಕಷ್ಟದಲ್ಲಿದ್ದಾರೆ. ಇವರನ್ನು ಸಂಕಷ್ಟದಿಂದ ಪಾರು ಮಾಡಲು ರಾಜ್ಯ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿದ್ದು, ಇದೆಲ್ಲದರ ಬಗ್ಗೆ ರಾಜ್ಯದ ಪ್ರತಿಯೊಬ್ಬ ಮತದಾರನ ಮನೆಬಾಗಿಲಿಗೆ ಹೋಗಿ ಮಾಹಿತಿ ತಲುಪಿಸುವ ಜವಾಬ್ದಾರಿ ನಿಮ್ಮದು ಎಂದಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರವಾಗಿ ಭಾರಿ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದ್ದು, ಜೊತೆಗೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಟಿಎಂಸಿ ಕಾರ್ಯಕರ್ತರಿಗೆ ಈ ಬಗ್ಗೆ ಎಚ್ಚರಿಕೆ ಕೊಟ್ಟಿರುವ ಮಮತಾ ಬ್ಯಾನರ್ಜಿ ಪರಿಹಾರ ನಿಧಿ ಹಾಗೂ ಯೋಜನೆಗಳಲ್ಲಿ ದುಬರ್ಳಕೆ ಮತ್ತು ಭ್ರಷ್ಟಾಚಾರ ಎಸಗಬಾರದು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರದ ಒಂಭತ್ತು ವರ್ಷಗಳ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ.








