ಬೆಂಗಳೂರು: ಗಡಿ ವಿಚಾರ ಹಾಗೂ ನೆರೆ ರಾಷ್ಟ್ರಗಳ ಜತೆಗಿನ ಸಂಬಂಧದ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಮಗ್ರತೆ, ಐಕ್ಯತೆ ಹಾಗೂ ಶಾಂತಿ ವಿಚಾರದಲ್ಲಿ ನಾವು ಈಗ ಹೆಚ್ಚಿನ ಗಮನ ಹರಿಸಬೇಕು. ಚೀನಾ ಗಡಿ ವಿಚಾರದಲ್ಲಿ ನಾವು ಮೊದಲಿಂದಲೂ ಎಚ್ಚರಿಕೆ ವಹಿಸಬೇಕಿತ್ತು’ ಎಂದರು.
‘ಈ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ದಿನಗಳಿಂದ ಗಡಿಯಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿದ್ದು, ಇದು ದೇಶದ ಭದ್ರತೆಗೆ ಸಂಬಂಧಿಸಿದ್ದರಿಂದ ನಾವು ಹುಷಾರಾಗಿ ಇರಬೇಕು. ನಾವು ಕಾಶ್ಮೀರ ವಿಚಾರದಲ್ಲಿ ಸಾಕಷ್ಟು ಅನುಭವಿಸಿದ್ದೇವೆ. ಈಗಾಗಲೇ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದು, ಈ ಬೆಳವಣಿಗೆಗಳು ಇನ್ನಷ್ಟು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ವಿಚಾರವನ್ನು ಇಡೀ ದೇಶ ಸೂಕ್ಷ್ಮವಾಗಿ ನಿಭಾಯಿಸಬೇಕು’ ಎಂದರು.