ಕ್ವಾಲಿಟಿ ಲಿಮಿಟೆಡ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ
ಹೊಸದಿಲ್ಲಿ, ಸೆಪ್ಟೆಂಬರ್22: ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟವನ್ನು ಮೋಸ ಮಾಡಿದ ಹಿನ್ನೆಲೆಯಲ್ಲಿ ಡೈರಿ ಉತ್ಪನ್ನಗಳನ್ನು ತಯಾರಿಸುವ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ವಂಚನೆ ಪ್ರಕರಣ ದಾಖಲಿಸಿದೆ.
ಬ್ಯಾಂಕ್ ಆಫ್ ಇಂಡಿಯಾದ ದೂರಿನ ನಂತರ ಏಜೆನ್ಸಿ ಈ ಪ್ರಕರಣವನ್ನು ದಾಖಲಿಸಿದೆ. ದೆಹಲಿ, ಬುಲಂದ್ಶಹರ್, ಸಹಾರನ್ಪುರ, ಅಜ್ಮೀರ್ ಮತ್ತು ಪಾಲ್ವಾಲ್ ಸೇರಿದಂತೆ ಎಂಟು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ.
ಕಂಪನಿಯ ನಿರ್ದೇಶಕರಾದ ಸಂಜಯ್ ಧಿಂಗ್ರಾ, ಸಿದ್ಧಾಂತ್ ಗುಪ್ತಾ ಮತ್ತು ಅರುಣ್ ಶ್ರೀವಾಸ್ತವ ಅವರನ್ನೂ ಸಿಬಿಐ ಪ್ರಕರಣದಲ್ಲಿ ಹೆಸರಿಸಲಾಗಿದೆ.
ಕ್ವಾಲಿಟಿ ಲಿಮಿಟೆಡ್ ಬ್ಯಾಂಕ್ ಹಣವನ್ನು ಬೇರೆಡೆಗೆ ವರ್ಗಾಯಿಸುವುದು ಸೇರಿದಂತೆ ಸಂಬಂಧಿತ ಪಕ್ಷಗಳೊಂದಿಗೆ ಆಕ್ರಮ ವಹಿವಾಟು, ಸುಳ್ಳು ದಾಖಲೆ / ರಶೀದಿಗಳು/ಖಾತೆಗಳ ಪುಸ್ತಕಗಳು, ಸುಳ್ಳು ಆಸ್ತಿಗಳು ಮತ್ತು ಬಾಧ್ಯತೆಗಳನ್ನು ಸೃಷ್ಟಿಸುವ ಮೂಲಕ ಮೋಸ ಮಾಡಿದೆ ಎಂದು ಬ್ಯಾಂಕುಗಳು ತಮ್ಮ ದೂರಿನಲ್ಲಿ ತಿಳಿಸಿವೆ.
ಬ್ಯಾಂಕ್ ಆಫ್ ಇಂಡಿಯಾವನ್ನು ಹೊರತುಪಡಿಸಿ, ಒಕ್ಕೂಟವು ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಆಂಧ್ರ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಅನ್ನು ಒಳಗೊಂಡಿದೆ.








