ಬೆಂಗಳೂರು: ಡಿಕೆಶಿ ಕೋಟೆಗೆ ಇಂದು ಬೆಳ್ಳಂಬೆಳಿಗ್ಗೆ ಲಗ್ಗೆ ಹಾಕಿರುವ ಸಿಬಿಐ, ಬೆಂಗಳೂರು, ಕನಕಪುರ, ದೆಹಲಿ, ಮುಂಬೈ ಸೇರಿದಂತೆ 14ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಸದಾಶಿವನಗರದ 2 ಮನೆಗಳು, ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ಮನೆ, ಕೆಂಚಾರ್ಲಹಳ್ಳಿಯಲ್ಲಿರುವ ಮನೆ, ಡಿ.ಕೆ ಸುರೇಶ್ ಮನೆ, ದೆಹಲಿಯ ಕಾವೇರಿ ಆಪಾರ್ಟ್ಮೆಂಟ್ನಲ್ಲಿರುವ ಸುರೇಶ್ ಮನೆ ಸೇರಿ ನಾಲ್ಕು ಕಡೆ, ಮುಂಬೈನ ಒಂದು ಕಡೆ ಸೇರಿದಂತೆ 14 ಕಡೆ 60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ 8ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ವಿರುದ್ಧ ಸಿಬಿಐ ಅಧಿಕಾರಿಗಳು ನಿನ್ನೆಯೇ ಎಫ್ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ವಿಶೇಷ ಕೋರ್ಟ್ನಲ್ಲಿ ಸರ್ಚ್ ವಾರೆಂಟ್ ಪಡೆದು ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಲಾಗಿದೆ. ಸಿಬಿಐ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.