ನವದೆಹಲಿ : ಕೊರೊನಾ ಲಾಕ್ ಡೌನ್ ಜಾರಿ ಹಿನ್ನೆಲೆ ಮುಂದೂಡಿಕೆಯಾಗಿದ್ದ ಸಿಬಿಎಸ್‌ಇ ಎಸ್ ಎಸ್ ಎಲ್ ಸಿಯ ಬಾಕಿ ವಿಷಯಗಳ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಈಶಾನ್ಯ ದೆಹಲಿ ಹೊರತುಪಡಿಸಿ ಇತರೆ ಯಾವುದೇ ರಾಜ್ಯದಲ್ಲಿ ಸಿಬಿಎಸ್‌ಇ 10ನೇ ತರಗತಿಯ ಉಳಿದ ವಿಷಯಗಳ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಈಗಾಗಲೇ ಸಿಬಿಎಸ್‌ಇ 10ನೇ ತರಗತಿ ಪ್ರಮುಖ ಪತ್ರಿಕೆಗಳ ಪರೀಕ್ಷೆ ಪೂರ್ಣಗೊಂಡಿದೆ. ಆದ್ರೆ ಈಶಾನ್ಯ ದೆಹಲಿಯಲ್ಲಿ ಪೌರತ್ವ ವಿರೋಧಿ ಪ್ರತಿಭಟನೆ ಹಾಗೂ ಲಾಕ್ ಡೌನ್ ನಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಅಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ 10 ದಿನಗಳ ಸಮಯಾವಕಾಶ ನೀಡೋದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಸಿಬಿಎಸ್‌ಇ 10ನೇ ತರಗತಿ ಬಾಕಿ ವಿಷಯಗಳ ಪರೀಕ್ಷೆ ರದ್ದುಗೊಳಿಸಿದ ಬಗ್ಗೆ ಮಾಹಿತಿ ನೀಡಿದೆ. ಸಿಬಿಎಸ್ಸಿಯ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಕಂಪ್ಯೂಟರ್ ಪರೀಕ್ಷೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ರದ್ದು ಪಡಿಸಿದೆ.
ಮುಂದಿನ ದಿನಗಳಲ್ಲಿ ಸಿಬಿಎಸ್ಸಿಯ 12ನೇ ತರಗತಿಗೆ ಪರೀಕ್ಷೆ ನಡೆಸಲಾಗುವುದು. ಇದು ಸಿಬಿಎಸ್ಸಿ ಮಂಡಳಿಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕದ ಎಸ್ ಎಸ್ ಎಲ್ ಸಿ, ಪಿಯುಸಿಗೆ ಸಂಬಂಧಿಸಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.