ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗಳ ಬಾಕಿ ಉಳಿಸಿರುವ 29 ವಿಷಯಗಳ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹತ್ತು ಮತ್ತು 12ನೇ ತರಗತಿಗಳ 29 ವಿಷಯಗಳ ಪರೀಕ್ಷೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಜುಲೈ 1ರಿಂದ ಜುಲೈ 15ರ ವರೆಗೂ ಪರೀಕ್ಷೆ ನಡೆಸುವುದಾಗಿ ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಜೆಇಇ (ಮೇನ್ಸ್) ಪರೀಕ್ಷೆ ಜುಲೈ 18ರಿಂದ 23ರ ವರೆಗೂ ನಡೆಸಲಾಗುವುದು. ನೀಟ್ ಪರೀಕ್ಷೆ ಜುಲೈ 26ರಂದು ನಿಗದಿಯಾಗಿದೆ. ಈ ಪ್ರವೇಶ ಪರೀಕ್ಷೆಗಳಿಗೂ ಮುನ್ನ ಬೋರ್ಡ್ ಪರೀಕ್ಷೆಗಳನ್ನು ಪೂರೈಸಲು ಕ್ರಮವಹಿಸಲಾಗಿದೆ.
ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಅನುವಾಗುವ ನಿಟ್ಟಿನಲ್ಲಿ ಜುಲೈನಲ್ಲಿ ಬಾಕಿ ಇರುವ ವಿಷಯಗಳ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆ ನಡೆದಿರುವ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುವಂತೆ ಈ ಹಿಂದೆಯೇ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.