ನವದೆಹಲಿ : ಬುಲಂದಶಹರ್ ಬಳಿ ನಡೆದ ಅಪಘಾತದಲ್ಲಿ ಸಿಬಿಎಸ್ಇ ಟಾಪರ್ ಸುದೀಕ್ಷಾ ಭಾಟಿ ಮೃತಪಟ್ಟಿದ್ದಾರೆ. ದಾದ್ರಿ ಜಿಲ್ಲೆಯ ಗ್ರೇಟರ್ ನೋಯ್ಡಾದ ಸುದೀಕ್ಷಾ 12ನೇ ತರಗತಿಯಲ್ಲಿ ಶೇ.98 ಅಂಕಗಳನ್ನು ಪಡೆದು, ಟಾಪರ್ ಆಗಿ ಹೊರಹೊಮ್ಮಿದ್ದರು. ಅಲ್ಲದೆ ಮ್ಯಾಸಚೂಸೆಟ್ಸ್ ಬಾಬ್ಸನ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಸುದೀಕ್ಷಾ ಬರೋಬ್ಬರಿ 3.8 ಕೋಟಿ ರೂ. ಶಿಷ್ಯವೇತನ ಸಹ ಪಡೆದುಕೊಂಡಿದ್ದರು. ಸುದೀಕ್ಷಾ ತನ್ನ ಸಹೋದರ ಜೊತೆ ಬೈಕ್ ನಲ್ಲಿ ಔರಾಂಗಬಾದ್ ನಿಂದ ಹೋಗುವಾಗ ನಡೆದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಾನು ಮತ್ತು ಸುದೀಕ್ಷಾ ನಮ್ಮ ಬೈಕಿನಲ್ಲಿ 30 ಕಿಲೋ ಮೀಟರ್ ಸ್ಪೀಡ್ ನಲ್ಲಿ ಔರಾಂಗಬಾದ್ ನಿಂದ ಹೋಗ್ತಿದ್ದೀವಿ. ಮೊದಲು ಮನೆಗೆ ಅಥವಾ ಮಾವನ ಬಳಿ ಹೋಗೋಣ ಅಂತ ಕೇಳಿದೆ. ಆಗ ಸುದೀಕ್ಷಾ ಮನೆಗೆ ತೆರಳೋಣ ಅಂತ ಹೇಳಿದಳು. ನಮ್ಮ ಮುಂದೆ ಹೋದ ಬುಲೆಟ್ ಬೈಕ್ ಸವಾರ ದಿಢೀರ್ ಅಂತ ಬ್ರೇಕ್ ಹಾಕಿದ. ನಾನು ನಿಧಾನವಾಗಿ ಹೋಗ್ತಿದ್ದರಿಂದ ಬೈಕ್ ನಿಲ್ಲಿಸಿದೆ. ಬೈಕ್ ಬ್ಯಾಲೆನ್ಸ್ ತಪ್ಪಿದ್ದರಿಂದ ಅಕ್ಕ ಕೆಳಗೆ ಬಿದ್ದಿದ್ದಳು ಎಂದು ಸುದೀಕ್ಷಾ ಸೋದರ ನಿಗಮ್ ಭಾಟಿ ಹೇಳಿದ್ದಾನೆ.
ಕೂಡಲೇ ಸುದೀಕ್ಷಾರನ್ನ ಆಸ್ಪತ್ರೆಗೆ ಸಾಗಿಸಿದಾಗ ವಿದ್ಯಾರ್ಥಿನಿ ಮೃತಪಟ್ಟಿರೋದನ್ನು ವೈದ್ಯರು ದೃಢಪಡಿಸಿದರು ಎಂದು ಬುಲಂದಶಹರ್ ಪೊಲೀಸರು ಮಾಹಿತಿ ನೀಡಿದ್ದಾರೆ.