ನಟಿ ರಾಗಿಣಿ ಬಾಯ್ಫ್ರೆಂಡ್ ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯಕ್ಗೆ ನೋಟಿಸ್
ಕಿರುತೆರೆಯ ನಾಲ್ವರಿಗೆ ಮತ್ತೆ ಐಎಸ್ಡಿ ನೋಟಿಸ್
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ದೂದ್ಪೇಡಾ ನಟ ದಿಗಂತ್ಗೆ ಸಿಸಿಬಿ ಪೊಲೀಸರು ಮತ್ತೆ 2ನೇ ಬಾರಿಗೆ ನೋಟಿಸ್ ನೀಡಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಸಿಸಿಬಿ ದಿಗಂತ್ಗೆ ಸಿಸಿಬಿ ಬುಲಾವ್ ನೀಡಿದೆ. ಕಳೆದ ವಾರ ದಿಗಂತ್ ಹಾಗೂ ಪತ್ನಿ ಐಂದ್ರಿತಾಗೆ ನೋಟಿಸ್ ನೀಡಿ ನಾಲ್ಕು ಗಂಟೆಗಳ ವಿಚಾರಣೆ ನಡೆಸಿ ವಾಪಸ್ ಕಳಿಸಲಾಗಿತ್ತು. ಮತ್ತೆ ಕರೆದರೆ ವಿಚಾರಣೆಗೆ ಬರುವಂತೆ ಮೊಬೈಲ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ಕಳಿಸಿದ್ದರು.
ದಿಗಂತ್ ಮೊಬೈಲ್ ರಿಟ್ರೀವ್ ಮಾಡಿದ ನಂತರ ಸಿಕ್ಕ ಮಾಹಿತಿ ಹಾಗೂ ಡ್ರಗ್ಸ್ ಪೆಡ್ಲರ್ಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ದಿಗಂತ್ಗೆ ಮತ್ತೆ ನೋಟಿಸ್ ನೀಡಲಾಗಿದೆ. ಪ್ರಮುಖವಾಗಿ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾನನ್ನು ಸಿಸಿಬಿ ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದು, ಆತ ನೀಡಿದ ಸುಳಿವಿನ ಮೇರೆಗೆ ದಿಗಂತ್ಗೆ ನೋಟಿಸ್ ನೀಡಲಾಗಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ ದಿಗಂತ್ ಮೊಬೈಲ್ ಹಾಗೂ ವಾಟ್ಸ್ ಆಪ್ ಡಾಟಾ ಡಿಲೀಟ್ ಮಾಡಿದ್ದರು. ಡಿಲೀಟ್ ಆದ ಡಾಟಾ ರಿಟ್ರೀವ್ ವೇಳೆ ಬಲವಾದ ಸಾಕ್ಷ್ಯ ಸಿಕ್ಕಿರುವ ಹಿನ್ನೆಲೆಯಲ್ಲಿಯೇ 2ನೇ ಬಾರಿ ನೋಟಿಸ್ ನೀಡಿರುವ ಸಾಧ್ಯತೆ ಇದ್ದು, ದಿಗಂತ್ಗೆ ಇಂದಿನ ವಿಚಾರಣೆ ಮುಳುವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ವಿಚಾರಣೆ ವೇಳೆ ದಿಗಂತ್ ಅಸಹಕಾರ ನೀಡಿದರೆ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಇದೇ ವೇಳೆ, ಸಿಸಿಬಿ ಪೊಲೀಸರು ನಟಿ ರಾಗಿಣಿ ಬಾಯ್ಫ್ರೆಂಡ್ ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯಕ್ಗೆ ನೋಟಿಸ್ ನೀಡಿದ್ದಾರೆ. ಇಂದು ವಿಚಾರಣೆಗೆ ಬರುವಂತೆ ಅರ್ಚನಾ ನಾಯಕ್ಗೆ ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ರವಿಶಂಕರ್ ಅರ್ಚನಾ ನಾಯಕ್ಗೆ ಡೈವೋರ್ಸ್ ಕೊಟ್ಟಿದ್ದೇಕೆ, ಆತ ಯಾರ ಯಾರ ಜತೆ ಸಂಪರ್ಕ ಹೊಂದಿದ್ದ, ಎಲ್ಲಿಗೆ ಹೋಗುತ್ತಿದ್ದ, ಮನೆಗೆ ಯಾರು ಬರುತ್ತಿದ್ದರು, ಯಾರ ಜತೆ ಹೆಚ್ಚು ಫೋನ್ನಲ್ಲಿ ಸಂಭಾಷಣೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ಪಡೆಯಲು ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಕಿರುತೆರೆಯ ನಾಲ್ವರಿಗೆ ಮತ್ತೆ ಐಎಸ್ಡಿ ನೋಟಿಸ್
ಸೋಮವಾರ ಡ್ರಗ್ಸ್ ಲಿಂಕ್ ಸಂಬಂಧ ನಟ ಲೂಸ್ ಮಾದ ಯೋಗೇಶ್, ಕ್ರಿಕೆಟಿಗ ಅಯ್ಯಪ್ಪ ಹಾಗೂ ನಿನ್ನೆ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಾರತಿ ಭಟ್ ನಡೆಸಿದ್ದ ಐಎಸ್ಡಿ ಅಧಿಕಾರಿಗಳು ಇಂದು ಮತ್ತೆ ನಾಲ್ವರು ಕಿರುತೆರೆ ನಟ-ನಟಿಯರಿಗೆ ನೋಟಿಸ್ ನೀಡಿದೆ.
ಕಳೆದ ವಾರ ಬೆಂಗಳೂರಿನ ಪೀಣ್ಯದಲ್ಲಿ ಐಎಸ್ಡಿ ಅಧಿಕಾರಿಗಳು ಕೇರಳ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಅರೆಸ್ಟ್ ಮಾಡಿದ್ದರು. ಅವರು ನೀಡಿದ ಮಾಹಿತಿ ಅಧರಿಸಿ ಇಂದು ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಯಾರಿಗೆ ನೋಟಿಸ್ ನೀಡಲಾಗಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.








