ಬೆಂಗಳೂರು: ಸ್ಯಾಂಡಲ್ವುಡ್ ಹಾಗೂ ಬೆಂಗಳೂರಿನ ಡ್ರಗ್ಸ್ ಜಾಲದ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ಪ್ರಭಾವಿ ರಾಜಕಾರಣಿಗಳ ಮಕ್ಕಳ ಬೆನ್ನು ಬಿದ್ದಿದ್ದಾರೆ.
ನಟಿ ಸಂಜನಾ ಗರ್ಲಾನಿ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಮಂಡ್ಯದ ಮಾಜಿ ಸಂಸದರ ಮಗ ಹಾಗೂ ಮಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮಾಲೀಕರಾಗಿರುವ ಮಾಜಿ ಸಂಸದರ ಪುತ್ರ, ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕದಲ್ಲಿದ್ದ. ರಾಹುಲ್ನ ವಾಟ್ಸ್ಆಪ್ ಚಾಟ್, ಕಾಲ್ಲಿಸ್ಟ್ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಜತೆಗೆ ಪಾರ್ಟಿ, ಕ್ಲಬ್ಗಳಲ್ಲಿ ಇಬ್ಬರೂ ರಾಹುಲ್ ಜೊತೆ ಸೇರಿಕೊಳ್ಳುತ್ತಿದ್ದರಂತೆ. ಹೀಗಾಗಿ ಮಾಜಿ ಸಂಸದರ ಪುತ್ರ-ಪುತ್ರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಮಂಡ್ಯದ ಪ್ರಭಾವಿ ರಾಜಕಾರಣಿಯ ಮಕ್ಕಳಿಗೆ ನೋಟಿಸ್ ನೀಡುವುದು ಉಳಿದ ರಾಜ್ಯದ ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಸಿನಿಮಾ ಕ್ಷೇತ್ರದವರ ಎದೆಯಲ್ಲಿ ಢವಢವ ಹೆಚ್ಚಾಗುವಂತೆ ಮಾಡಿದೆ.
ಉದ್ಯಮಿ ಕಾರ್ತಿಕ್ ರಾಜ್ಗೆ ಸಿಸಿಬಿ ವಶಕ್ಕೆ..!
ಇದೇ ವೇಳೆ ಸಿಸಿಬಿ ಪೊಲೀಸರು ಕೋರಮಂಗಲದ ಹೋಟೆಲ್ ಉದ್ಯಮಿ ಕಾರ್ತಿಕ್ ರಾಜ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಕೋರಮಂಗಲದಲ್ಲಿ ಮಲ್ಟಿ ಸ್ಟಾರ್ ಹೋಟೆಲ್ ಹೊಂದಿರುವ ಕಾರ್ತಿಕ್ ರಾಜ್, ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಮನೆ ಹೊಂದಿದ್ದಾರೆ. ಕಾರ್ತಿಕ್ ರಾಜ್ ಜತೆ ಮಲ್ಟಿ ಸ್ಟಾರ್ಗಳ ಸಂಪರ್ಕ ಇದೆ ಎನ್ನಲಾಗಿದೆ. ಜತೆಗೆ ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ರಾಜ್ ಸ್ನೇಹಿತರು. ಇವರಿಬ್ಬರೂ ಪಾರ್ಟಿಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.