ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗದ ನಟಿ ರಾಗಿಣಿ ದ್ವಿವೇದಿ ನಾಳೆ ಬರಲೇಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಅನಾರೋಗ್ಯ ಹಾಗೂ ಕೊರೊನಾ ಜಾಗೃತಿ ಕಾರ್ಯಕ್ರಮದ ನೆಪ ಹೇಳಿ ವಕೀಲರ ಮೂಲಕ ಸೋಮವಾರದವರೆಗೆ ರಾಗಿಣಿ ದ್ವಿವೇದಿ ಸಮಯ ಕೇಳಿ ಮನವಿ ಸಲ್ಲಿಸಿದ್ದರು. ಆದರೆ, 6 ದಿನಗಳ ಕಾಲಾವಕಾಶ ನೀಡಲು ಸಿಸಿಬಿ ಅಧಿಕಾರಿಗಳು ನಿರಾಕರಿಸಿದ್ದಾರೆ.
ನಾಳೆ ವಿಚಾರಣೆಗೆ ಹಾಜರಾಗಲೇಬೇಕು ಎಂದು ಇಂದು ರಾಗಿಣಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆದರೆ, ಇಂದು ವಿಚಾರಣೆಗೆ ಬರಲು ಆಗದೇ ಇರುವುದಕ್ಕೆ ರಾಗಿಣಿ ಪರ ವಕೀಲರು ಕಾರಣ ನೀಡಿದ್ದಾರೆ. ರಾಗಿಣಿ ಅವರು ಕೊರೊನಾ ಪ್ಲಾಸ್ಮಾ ದಾನದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಸಮಯಾವಕಾಶ ನೀಡುವಂತೆ ರಾಗಿಣಿ ಪರ ವಕೀಲರು ಸಿಸಿಬಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಆದರೆ, ಕಾರ್ಯಕ್ರಮ ಎಲ್ಲಿ, ಯಾವಾಗ ಪ್ಲಾಸ್ಮಾ ದಾನವಿದೆ, ಸ್ಥಳದ ಮಾಹಿತಿ ನೀಡಿ ಎಂದು ಸಿಸಿಬಿ ಪೊಲೀಸರು ಕೇಳುತ್ತಿದ್ದಂತೆ ರಾಗಿಣಿ ಪರ ವಕೀಲರು ತಡಬಡಾಯಿಸಿದ್ದಾರೆ.
ಹೀಗಾಗಿ ನಾಳೆ ವಿಚಾರಣೆಗೆ ಬರಲೇಬೇಕು ಎಂದು ವಕೀಲರ ಮೂಲಕ ಮತ್ತೊಂದು ನೋಟಿಸ್ ಕಳಿಸಿ ಕೊಟ್ಟಿದ್ದಾರೆ. ನಾಳೆಯೂ ರಾಗಿಣಿ ವಿಚಾರಣೆಗೆ ಹಾಜರಾಗದೇ ಇದ್ದರೆ ಮೂರನೇ ಬಾರಿ ನೋಟಿಸ್ ನೀಡಿ ನೇರವಾಗಿ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರಿಗೆ ಕಾನೂನಿನಲ್ಲಿ ಅವಕಾಶ ಇದೆ ಎನ್ನಲಾಗಿದೆ. ಹೀಗಾಗಿ ನಟಿ ರಾಗಿಣಿ ನಾಳೆ ಸಿಸಿಬಿ ವಿಚಾರಣೆಗೆ ಹಾಜರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.