ಸಿಡಿ ಕೇಸ್ : “ನಾನು ಉಲ್ಟಾ ಹೊಡೆದಿಲ್ಲ” ಎಂದ ಸಿಡಿ ಯುವತಿ
ಬೆಂಗಳೂರು : ಮಾಜಿ ಸಚಿವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ಉಲ್ಟಾ ಹೊಡೆದಿದ್ದಾಳೆ ಅನ್ನೋ ಸುದ್ದಿಗಳು ಹರಿದಾಡಿದ ಹಿನ್ನೆಲೆ ಈ ಬಗ್ಗೆ ಸ್ವತಃ ಯುವತಿಯೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ದಿನಾಂಕ 12-04-2021 ಮಾಧ್ಯಮಗಳಲ್ಲಿ ನಾನು ತನಿಖಾಧಿಕಾರಿಗಳ ಮುಂದೆ ಪ್ರಕರಣದ ಸಂಬಂಧ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡಿದ್ದೇನೆ. ನಾನು ನೀಡಿದ ದೂರು ಮತ್ತು ನ್ಯಾಯಾಧೀಶರ ಸಮ್ಮುಖದಲ್ಲೇ ಕೊಟ್ಟ 164 ಹೇಳಿಕೆ ಒತ್ತಡದಿಂದ ನೀಡಿದ್ದೇನೆ. ಆದ್ದರಿಂದ ಮತ್ತೊಮ್ಮೆ ಹೇಳಿಕೆ ಪಡೆಯಬೇಕೆಂದು ತನಿಖಾಧಿಕಾರಿಗಳಿಗೆ ಕೇಳಿಕೊಂಡಿದ್ದಾಗಿ ವರದಿ ಆಗಿದ್ದು ಇದು ಸತ್ಯಕ್ಕೆ ದೂರವಾಗಿರುತ್ತದೆ. ನಾನು ಈಗಲೂ ಕೂಡ ಈ ಮುಂಚೆ ನೀಡಿದ ಹೇಳಿಕೆಗೆ ಬದ್ಧಳಾಗಿರುತ್ತೇನೆ.
ನನ್ನ ಪೋಷಕರೊಂದಿಗೆ ಮಾತನಾಡಿ ನನ್ನ ಮನ ಪರಿವರ್ತನೆಯಾಗಿ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದು ಸತ್ಯಕ್ಕೆ ದೂರ ಆಗಿರುತ್ತದೆ. ನಾನು ಈ ಪ್ರಕರಣದಲ್ಲಿ ಇಂದು ತನಿಖಾಧಿಕಾರಿಗ ಎದುರು ಕೆಲವು ಮಾಹಿತಿಗಳನ್ನು ಒದಗಿಸಲು ಸಮಯಾವಕಾಶ ಕೋರಿ ಹಾಜರಾಗಿದ್ದು ಬೇರೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರುವುದಿಲ್ಲ. ನನ್ನ ವಕೀಲರೊಂದಿಗೆ ಎಸ್ ಟಿಗೆ ಹೋಗುವ ಕುರಿತು ಮುಂಚೆಯೇ ಮಾಹಿತಿ ನೀಡಿರುತ್ತೆನೆ. ಈಗಾಗಲೇ ನಾನು ಮಾನ್ಯ ಪೊಲೀಸ್ ಆಯುಕ್ತರಿಗೆ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಕರೆಸದಿರುವ ಕುರಿತು ದೂರು ನೀಡಿದ್ದು ಅವರು ಕೊರೋನಾ ಪೀಡಿತರಂತೆ ನಟಿಸುತ್ತಿದ್ದು ವಿಚಾರಣೆ ಇಂದ ತಪ್ಪಿಸಿಕೊಳ್ಳಲು ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಯನ್ನು ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.










