ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಹಾಗಾಗಿ ಮಂದಿರ, ಮಸೀದಿ, ಚರ್ಚ್ ಗಳು ಬಂದ್ ಆಗಿವೆ. ಅಲ್ಲದೆ ಹಬ್ಬಗಳು ಮೊಟಕುಗೊಂಡಿವೆ. ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಇದೀಗ ಇಸ್ಲಾಂ ಧರ್ಮಿಯರ ಪ್ರಮುಖ ಹಬ್ಬವಾದ ರಂಜಾನ್ ಸಹ ಸರಳವಾಗಿ ಆಚರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಎಪ್ರಿಲ್ 25 ರಿಂದ ರಂಜಾನ್ ಉಪವಾಸ ಶುರುವಾಗುತ್ತದೆ. ಮುಸ್ಲಿಂ ಸಮುದಾಯದವರು ಒಂದು ತಿಂಗಳುಗಳ ಕಾಲ ಉಪವಾಸ ಮಾಡುತ್ತಾರೆ. ಆದ್ದರಿಂದ ಈ ಅವಧಿಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿವೆ. ಹಾಗಾಗಿ ಈ ಬಾರಿ ರಂಜಾನ್ ಹಬ್ಬವನ್ನು ಹೇಗೆ ಆಚರಿಸಬೇಕೆಂದು ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಸೂಚನೆಯಂತೆ ಮುಸ್ಲಿಂ ಸಮುದಾಯದವರು ನಡೆದುಕೊಳ್ಳಬೇಕು ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಅಲ್ಪ ಸಂಖ್ಯಾತ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷ, ಮೊಹಮ್ಮದ್ ಯೂಸುಫ್, ಕೊರೊನಾ ಹರಡುವ ಭೀತಿಯಿಂದ ಈ ಬಾರಿ ಮಾರ್ಗಸೂಚನೆಗಳ ಪ್ರಕಾರ ರಂಜಾನ್ ಆಚರಿಸಬೇಕು. ಸರ್ಕಾರ ನೀಡಿರುವ ಈ ಮಾರ್ಗಸೂಚಿಗಳು 03-05-2020ರ ವರೆಗೆ ಜಾರಿಯಲ್ಲಿ ಇರುತ್ತವೆ ಎಂದು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ
ರಾಜ್ಯ ಅಲ್ಪ ಸಂಖ್ಯಾತ ಮತ್ತು ವಕ್ಫ್ ಮಂಡಳಿ ನೀಡಿದ ಮಾರ್ಗ ಸೂಚನೆಗಳು
• ರಂಜಾನ್ ಹಬ್ಬ ಆಚರಣೆ ವೇಳೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರರ್ಥಾನೆ ಮಾಡುವಂತಿಲ್ಲ
• ಧ್ವನಿವರ್ಧಕಗಳ ಮೂಲಕ, ಪ್ರಾರ್ಥನೆಯ ಕುರಿತು ಸಾರ್ವಜನಿಕ ಮಾಹಿತಿ ನೀಡುವಂತಿಲ್ಲ
• ಜೋರಾದ ಧ್ವನಿ ಹೊರಸೂಸುವ ಧ್ವನಿ ವರ್ಧಕಗಳ ಮೂಲಕ ಅಜಾನ್ ಕೂಗುವಂತಿಲ್ಲ ಅಜಾನ್ ಕೂಗಲು ಕಡಿಮೆ ಧ್ವನಿಯ ಧ್ವನಿವರ್ಧಕ ಬಳಸಬೇಕು. ಉಪವಾಸ ವ್ರತ ಅಂತ್ಯ ಕುರಿತಂತೆ ಜೋರಾದ ಶಬ್ದದೊಂದಿಗೆ ಮಾಹಿತಿ ನೀಡುವಂತಿಲ್ಲ. ಹಾಗೆಯೇ ಸಾಮೂಹಿಕ ಪ್ರಾರ್ಥನೆಯ ವೇಳೆ, ಧ್ವನಿ ವರ್ಧಕ ಬಳಸಿ, ಪ್ರವಚನ ನೀಡುವಂತಿಲ್ಲ
• ಇಫ್ತಾರ್ ಕೂಟಗಳು ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ
• ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಸಿವಂತಿಲ್ಲ
• ಮಸೀದಿ ಮತ್ತು ದರ್ಗಾಗಳ ಸುತ್ತಾಮುತ್ತಾ ಯಾವುದೇ ಉಪಹಾರ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.
• ರಂಜಾನ್ ನಮಾಜ್ ಹೆಸರಿನಲ್ಲಿ ಗುಂಪು ಬೇಡ. ಇಫ್ತಿಯಾರ್ ಕೂಟ ನಡೆಸಬಾರದು.








