ಮೈಸೂರು: ನವರಾತ್ರಿಯ 9ನೇ ದಿನ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕ ಆಯುಧ ಪೂಜೆ ನೆರವೇರುತ್ತಿದೆ.
ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ ಖಾಸಾ ಆಯುಧಗಳು, ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದು, ದಸರಾ (Dasara) ವೈಭವ ಮತ್ತಷ್ಟು ಕಳೆಗಟ್ಟಲಿದೆ. ನವರಾತ್ರಿಯ 9 ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ನೆರವೇರಿಸಿದ್ದಾರೆ. ಈ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.
ಬೆಳಿಗ್ಗೆ 6ಕ್ಕೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾಹೋಮ , ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನವಾಗಿವೆ. ಆನಂತರ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ರವಾನೆ ಮಾಡಲಾಯಿತು. ನಂತರ ಚಂಡಿ ಹೋಮ ಪೂರ್ಣಾಹುತಿ ನೆರವೇರಲಿದೆ. ಆ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬಂದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ.
ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೂ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಇಡೀ ರಾಜ್ಯವೇ ಇಂದು ದಸರಾ ಹಬ್ಬದಲ್ಲಿ ಮಿಂದೇಳುತ್ತಿದೆ.