ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಇಲ್ಲವೆ, ಅವರ ಪುತ್ರ ಬಿ.ಎಸ್.ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಕುರಿತು ಯಾವುದೇ ಬಹಿರಂಗ ಹೇಳಿಕೆ ನೀಡದೆ ಶಿಸ್ತು ಕಾಪಾಡುವಂತೆ ರಾಜ್ಯ ಶಾಸಕರಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೂ ಅದನ್ನ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ವರಿಷ್ಠರ ಗಮನಕ್ಕೆ ತರಬೇಕು ಎಂದು ಹೇಳಿದೆ.
ಇತ್ತೀಚೆಗೆ ಕೆಲ ಶಾಸಕರು ಜಗದೀಶ್ ಶೆಟ್ಟರ್ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ, ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಸಂಣದರ್ಭದಲ್ಲಿ ಹರಡಿದ್ದ ಕೆಲವು ವದಂತಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ ಕೇಂದ್ರ ಬಿಜೆಪಿ ಶಾಸಕರಿಗೆ ಯಾವುದೇ ತೀರ್ಮಾ ತೆಗೆದುಕೊಳ್ಳದಂತೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಗಳು ನಮ್ಮ ಗಮನಕ್ಕೆ ಬರುತ್ತಿವೆ. ಯಡಿಯೂರಪ್ಪನವರ ಆಡಳಿತ ವೈಖರಿ ಹಾಗೂ ಅವರ ಕುಟುಂಬದವರ ಹಸ್ತಕ್ಷೇಪ, ಸ್ವಜನಪಕ್ಷಪಾತದ ಬಗ್ಗೆಯೂ ನಮಗೆ ಇಂಚಿಂಚೂ ಮಾಹಿತಿ ಇದೆ. ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಮೌನಕ್ಕೆ ಶರಣಾಗಿದ್ದೇವೆ ಎಂದರೆ ಅದನ್ನು ದೌರ್ಬಲ್ಯ ಎಂದು ತಿಳಿಯಬಾರದು. ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲಾ ಶಾಸಕರು ಬದ್ಧರಾಗಿರಬೇಕೆಂದು ಕಿವಿಮಾತು ಹೇಳಿದರು. ಹಾಗೇ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಯಾರೊಬ್ಬ ದೆಹಲಿಗೆ ಬರಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ವರಿಷ್ಟರು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.