ನವದೆಹಲಿ: 34 ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ, ಹೊಸ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಅಸ್ತು ಎಂದಿದೆ.
ಪ್ರಮುಖವಾಗಿ ಈಗಿರುವ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯವಾಗಿ ಮರು ನಾಮಕರಣ ಮಾಡಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ. 1986ರಲ್ಲಿ ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದಾಗ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿತ್ತು. ಅಂದಿನ ಶಿಕ್ಷಣ ನೀತಿ ಪ್ರಕಾರ ಶಿಕ್ಷಣ ಸಚಿವಾಲಯವನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಎಂದು ಬದಲಾಯಿಸಲಾಗಿತ್ತು.
1986ರ ಹೊಸ ಶಿಕ್ಷಣ ನೀತಿಗೆ 1992ರಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿತ್ತು. ಈಗ ಆ ಹೆಸರನ್ನು ಮತ್ತೆ ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲಾಗಿದೆ.
ಹೊಸ ಕಾಯ್ದೆಯ ಪ್ರಮುಖ ಆಂಶಗಳಲ್ಲಿ ಎಲ್‍ಕೆಜಿಯಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಶಿಫಾರಸಿಗೆ ಒಪ್ಪಿಗೆ ಸಿಕ್ಕಿದೆ. ಇನ್ನು ಮುಂದೆ ಉನ್ನತ ಶಿಕ್ಷಣ ಹಂತದಲ್ಲಿದ್ದ ಎಂಫಿಲ್ ಪದವಿಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
3 ಹಂತದ ಮೌಲ್ಯಮಾಪನ..!
ನೂತನ ಕಾಯ್ದೆಯ ಪ್ರಕಾರ ಶಿಕ್ಷಣದಲ್ಲಿ ಮಕ್ಕಳ ಕೌಶಲ್ಯಕ್ಕೆ ಹೆಚ್ಚಿಸುವುದು ಪ್ರಮುಖ ಅಂಶವಾಗಿದೆ. ವರ್ಷದಲ್ಲಿ ಕೇವಲ ಎರಡು ಬಾರಿ ಮಾತ್ರ ಪರೀಕ್ಷೆ ನಡೆಸಬೇಕು. ಬೋರ್ಡ್ ಪರೀಕ್ಷೆಗಳನ್ನು ಕಡಿಮೆ ಮಾಡುವುದು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ನೀತಿಯಲ್ಲಿ ಮೂರು ಹಂತದ ಮೌಲ್ಯಮಾಪನ ಮಾಡುವುದನ್ನು ಕಡ್ಡಾಯಗೊಳಿಸಿದೆ. ಅವುಗಳು ಎಂದರೆ..
1. ಶಾಲೆಗಳಲ್ಲಿ ಮಕ್ಕಳು ಸ್ವಯಂ ತಾವೇ ಮೌಲ್ಯಮಾಪನ ಮಾಡಿಕೊಳ್ಳುವುದು
2. ಸಹಪಾಠಿಗಳು ಮೌಲ್ಯಮಾಪನ ಮಾಡುವುದು
3 ಶಿಕ್ಷಕರು ಮೌಲ್ಯಮಾಪನ ಮಾಡುವುದು
ಮೂರು ಹಂತದ ಮೌಲ್ಯಮಾಪನ ಬಳಿಕ ಪೋಷಕರ ಸಭೆ ನಡೆಸಿ ರಿಪೋರ್ಟ್ ಕಾರ್ಡ್ ತಯಾರಿಸುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿದೆ. ಜತೆಗೆ ಮಕ್ಕಳ ಕೌಶಲ್ಯದ ಬಗ್ಗೆ ರಿಪೋರ್ಟ್ ಕಾರ್ಡ್‍ನಲ್ಲಿ ನಮೂದಿಸುವುದು ಕಡ್ಡಾಯವಾಗಲಿದೆ ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿ ತನಗೆ ಇಷ್ಟವಾದ ಒಂದು ಕೌಶಲ್ಯವನ್ನು ಕಲಿಯಲೇಕು ಎಂಬುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ.
ಶಿಕ್ಷಣದಲ್ಲಿ ಏಕರೂಪತೆ ತರುವುದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವತ್ತ ಗಮನ ಹರಿಸುವುದು ಹೊಸ ನೀತಿಯ ಗುರಿಯಾಗಿದೆ.