ದೇಶದ ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ಒಂದು ಸಂತೋಷದ ಸುದ್ದಿಯನ್ನು ನೀಡುತ್ತಿದೆ. ಜನಸಾಮಾನ್ಯರು ಬಳಸುವ ಅನೇಕ ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶೇಕಡಾ 12ರಷ್ಟು ಆಗಿರುವುದರಿಂದ, ಅದು ವ್ಯಾಪಕವಾಗಿ ಮನೆ ಖರ್ಚುಗಳ ಮೇಲೆ ಪರಿಣಾಮ ಬೀರಿದೆ. ಇದನ್ನೆ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಇದೀಗ ಈ ಶ್ಲ್ಯಾಬ್‌ನ್ನು ಶೇಕಡಾ 5ಕ್ಕೆ ಇಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
ಪ್ರಸ್ತುತ 12% ಜಿಎಸ್‌ಟಿ ಶ್ಲ್ಯಾಬ್‌ನ ಅಡಿಯಲ್ಲಿ ಬರುವ ಬಹುತೇಕ ವಸ್ತುಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ದಿನಸಿ, ತಿನಿಸು, ವಿದ್ಯುತ್ ಸಾಧನಗಳು, ಪ್ರತಿದಿನ ಬಳಸುವ ಅಗತ್ಯ ವಸ್ತುಗಳಾದ ಟೂತ್‌ಪೇಸ್ಟ್, ಹ್ಯಾಂಡ್‌ವಾಶ್, ಪೆನ್, ಫೈಲ್‌ಗಳು ಸೇರಿವೆ. ಇವುಗಳ ಮೇಲಿನ ತೆರಿಗೆ ಇಳಿದರೆ, ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದಿಂದ ಸ್ವಲ್ಪ ಮಟ್ಟಿಗಾದರೂ ನಿರಾಳತೆ ಸಿಗಲಿದೆ.
ಈ ಶ್ಲ್ಯಾಬ್‌ನ ಮಾರ್ಪಾಡಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಪ್ರಾರಂಭದಲ್ಲಿ ₹40,000 ರಿಂದ ₹50,000 ಕೋಟಿ ರೂ.ಗಳಷ್ಟು ಆರ್ಥಿಕ ಹೊರೆ ಬೀಳಬಹುದು ಎಂಬ ಅಂದಾಜಿದೆ. ಆದರೂ ಸರ್ಕಾರ ಮುಂದಿನ ವರ್ಷಗಳಲ್ಲಿ ವ್ಯಾಪಾರದ ಪ್ರಮಾಣ ಹೆಚ್ಚಾಗುವುದರಿಂದ ತೆರಿಗೆ ಸಂಗ್ರಹ ಪುನಃ ಹೆಚ್ಚಾಗಲಿದೆ ಎಂಬ ನಂಬಿಕೆಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದೆ.








