ಚೆನ್ನೈ: ರಾಷ್ಟ್ರೀಯ ಶೈಕ್ಷಣಿಕ ನೀತಿ (NEP) ಕುರಿತಂತೆ ತಮಿಳುನಾಡು ಸರ್ಕಾರ ಹಾಗೂ ಕೇಂದ್ರದ ನಡುವಿನ ವಿವಾದವು ಮಕ್ಕಳ ನಡುವಿನ ಜಗಳದಂತಿದೆ ಎಂದು ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ದಳಪತಿ ಹೇಳಿದ್ದಾರೆ.
ಟಿವಿಕೆ ಪಕ್ಷದ ವಾರ್ಷಿಕೋತ್ಸವ ಸಭೆಯಲ್ಲಿ ಮಾತನಾಡಿದ ಅವರು, NEP ಜಾರಿಗೆ ತರದಿದ್ದರೆ ರಾಜ್ಯಕ್ಕೆ ಬರಬೇಕಾದ 2,400 ಕೋಟಿ ರೂಪಾಯಿಗಳನ್ನು ತಡೆಹಿಡಿಯುವುದು ಅನ್ಯಾಯ ಎಂದು ಕಿಡಿಕಾರಿದ್ದಾರೆ. ರಾಜಕೀಯ ಸ್ವಾರ್ಥದಿಂದ ತಮಿಳುನಾಡಿಗೆ ಅನ್ಯಾಯ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಕಿತ್ತಾಟ ನಡೆಸಿದರೆ, ಇದಕ್ಕೆ ತುತ್ತಾಗುವುದು ಸಾರ್ವಜನಿಕರು ಎಂದು ಹೇಳಿದ್ದಾರೆ.
NEP ವಿರೋಧದ ಹಿನ್ನೆಲೆಯಲ್ಲಿ #GetOut ಹ್ಯಾಶ್‌ಟ್ಯಾಗ್ ಬಳಸಿ BJP ಹಾಗೂ DMK ವಿರುದ್ಧ ಕೈಜೋಡಿಸುವಂತೆ ವಿಜಯ್ ದಳಪತಿ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯಗೊಳಿಸುತ್ತಿವೆ. ಇದು ವಿದ್ಯಾರ್ಥಿಗಳಿಗೆ ಹಿತಕರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು ಸರ್ಕಾರ NEP ಜಾರಿಗೆ ತರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಿಂಜರಿದರೆ, ಇದು ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಲಿದೆ. ನಾವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತೇವೆ, ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೂ ಖಂಡನೀಯ ಎಂದು ವಿಜಯ್ ದಳಪತಿ ಹೇಳಿದ್ದಾರೆ.
ಈ ಹೇಳಿಕೆಯಿಂದ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.








