ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಹೋಗುತ್ತಿದ್ದು, ಇಂದು 8 ಮಂದಿ ಬಲಿಯಾಗುವುದರೊಂದಿಗೆ ಕೊರೊನಾಗೆ ಸತ್ತವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.
ಇಂದು 204 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ 55 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ಕೊರೊನ ಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನಕ್ಕೆ ಜಿಗಿದಿದೆ.
ಒಂದು ಬರೋಬ್ಬರಿ 8 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳು ಕೊರೊನಾ ಸೋಂಕಿನಿಂದ ಮೃತಪಟ್ಟವರ ಪಟ್ಟಿಯಲ್ಲಿ ಖಾತೆ ತೆರೆದಿವೆ. ಶಿವಮೊಗ್ಗದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 56 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ 62 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಇಂದು 5 ಮಂದಿ ಉಸಿರು ನಿಲ್ಲಿಸಿದ್ದಾರೆ. ಬೀದರ್‍ನಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ 26 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಕೊರೊನಾ ದೃಢಪಟ್ಟಿದೆ.
ಇಂದು 204 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7734ಕ್ಕೆ ಏರಿಕೆಯಾಗಿದೆ. ಇಂದು 348 ಮಂದಿ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 4804 ಮಂದಿ ಡಿಶ್ಚಾರ್ಜ್ ಆಗಿದ್ದು, 2824 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 55 ಪ್ರಕರಣಗಳು ದಾಖಲಾಗಿದ್ದಾರೆ, ಯಾದಗಿರಿ ಜಿಲ್ಲೆ 37 ಪ್ರಕರಣಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಬಳ್ಳಾರಿ 29, ಕಲಬುರಗಿ 19, ಬೀದರ್ 12, ದಕ್ಷಿಣ ಕನ್ನಡ 8, ಧಾರವಾಡ 8, ಮಂಡ್ಯ 7, ಹಾಸನ 5, ಉಡುಪಿ 4, ಬಾಗಲಕೋಟ 4, ಶಿವಮೊಗ್ಗದಲ್ಲಿ 4 ಹೊಸ ಪ್ರಕರಣಗಳು ದಾಖಲಾಗಿವೆ.








