ಶಿವಮೊಗ್ಗ: ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಚಕ್ರವರ್ತಿ ಹೊಗಳು ಭಟ್ಟರು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸೂಲಿಬೆಲೆ ಚಕ್ರವರ್ತಿ ಹಾಗೂ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಬಗ್ಗೆ ಹೊಗಳಿ ಮಾತನಾಡುತ್ತಾರೆ. ಆದ್ರೆ ಈರುಳ್ಳಿ ಬೆಲೆ 200 ರೂಪಾಯಿ ತಲುಪಿದಾಗ ಈ ಇಬ್ಬರು ಎಲ್ಲಿಗೆ ಹೋಗಿದ್ದರು, ಆಗ ಏಕೆ ಮಾತನಾಡಲಿಲ್ಲ. ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ತುಟಿಬಿಚ್ಚುತ್ತಿಲ್ಲ. ಇದೇನಾ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಇನ್ನು ಇದೇ ವೇಳೆ ರಾಜ್ಯ ಸರ್ಕಾರವನ್ನು ಟೀಕಿಸಿದ ಅವರು ಎಸ್.ಎಲ್.ಭೈರಪ್ಪ ಅವರನ್ನು ಬಿಜೆಪಿಯ ಏಜೆಂಟ್ ಎಂದು ಕರೆದರು. ಎಸ್.ಎಲ್ ಭೈರಪ್ಪ ಬಿಜೆಪಿಯ ಏಜೆಂಟ್. ಹಾಗಾಗಿಯೇ ಅವರ ಹೆಸರಿನಲ್ಲಿ ಬಜೆಟ್ ನಲ್ಲಿ ಐದುಕೋಟಿ ಮೀಸಲಿಟ್ಟಿದ್ದಾರೆ. ಆದರೆ ಭೈರಪ್ಪ ಅವರ ಗ್ರಾಮಕ್ಕೆ ಯಾವ ಉದ್ದೇಶಕ್ಕೆ ಹಣ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಶಾಲೆಗಳೇ ಇಲ್ಲ. ಭೈರಪ್ಪ ಅವರ ಊರಿಗೆ ನೀಡಿದ ಅನುದಾನವನ್ನು ಉತ್ತರ ಕರ್ನಾಟಕದ ಶಾಲೆಗಳಿಗೆ ನೀಡಬಹುದಿತ್ತು ಎಂದರು.
ಮುಂದುವರೆದು ಮಾತನಾಡಿ ಸಿ.ಟಿ ರವಿ, ಆರ್. ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡ ಗೋಪಾಲ ಕೃಷ್ಣ, ಶರತ್ ಬಚ್ಚೇಗೌಡ ಪಕ್ಷದಿಂದ ದೂರ ಹೋದರೆ ಪಕ್ಷಕ್ಕೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಸಿ.ಟಿ.ರವಿ ಹಾಗೂ ಆರ್.ಅಶೋಕ್ ಹೇಳುತ್ತಾರೆ. ಅದೇ ಕಾಂಗ್ರೆಸ್ ನ 17 ಜನ ಶಾಸಕರನ್ನು ಬಿಜೆಪಿಗೆ ಸೆಳೆದರು ಅದಕ್ಕೇನು ಹೇಳುತ್ತಾರೆ ಎಂದು ಕಿಡಿಕಾರಿದರು.