ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರ್ಮಾಪಕ ಮುನಿರತ್ನ ಕುರುಕ್ಷೇತ್ರ ಶತದಿನೋತ್ಸವ ಸಂಭ್ರಮದಲ್ಲಿ ಸಿಹಿಸುದ್ದಿ ನೀಡಿದ್ದಾರೆ.
ಮುನಿರತ್ನ ನಿರ್ಮಿಸಿ, ಚಿತ್ರಕಥೆ ಬರೆದಿದ್ದ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್, ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಅಂಬರೀಶ್ ಮುಂತಾದ ಘಟಾನುಘಟಿ ನಾಯಕರು ಅಭಿನಯಿಸಿದ್ದು, ಈ ಸಿನಿಮಾ 100 ದಿನಗಳ ಪ್ರದರ್ಶನ ಕಂಡಿದೆ. ಕುರುಕ್ಷೇತ್ರ ಚಿತ್ರದ ಶತದಿನೋತ್ಸವವನ್ನು ನಿರ್ಮಾಪಕ ಮುನಿರತ್ನ ಶಿವರಾತ್ರಿ ದಿನ ಅದ್ಧೂರಿಯಾಗಿ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಭೈರತಿ ಬಸವರಾಜು ಸೇರಿದಂತೆ ರಾಜಕೀಯ ರಂಗದ ಹಲವು ಗಣ್ಯರು, ಅಂಬರೀಷ್ ಪುತ್ರ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್ ವೆಂಕಟೇಶ್, ರವಿಶಂಕರ್, ಅಭಿಷೇಕ್ ಅಂಬರೀಶ್, ಶ್ರೀನಿವಾಸ್ ಮೂರ್ತಿ, ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿ ಹಲವು ಕಲಾವಿದರು, ತಂತ್ರಜ್ಞರು ಮತ್ತು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿದ್ದ ಅಂಬರೀಷ್ ಪುತ್ರ ಅಭಿಷೇಕ್ , ದರ್ಶನ್ ಜೊತೆ ತಾನೊಂದು ಸಿನಿಮಾ ಮಾಡಬೇಕು ಎಂಬ ತನ್ನ ಆಸೆಯನ್ನು ಹೊರಹಾಕಿದರು. ಅಭಿಷೇಕ್ ಮಾತಿಗೆ ಪ್ರತಿಕ್ರಿಯಿಸಿದ ಮುನಿರತ್ನ, ಅಭಿಷೇಕ್ ಅವರ ಕೋರಿಕೆಯನ್ನು ಖಂಡಿತ ಈಡೇರಿಸುತ್ತೇನೆ. ದರ್ಶನ್ ಅವರನ್ನು ಒಬ್ಬ ಮೇಜರ್ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ ಕೂಡ. ವಿಂಗ್ ಕಮಾಂಡರ್ ಆಗಿ ದರ್ಶನ್ ಅವರನ್ನು ತೆರೆಮೇಲೆ ತರಲಿದ್ದೇನೆ. ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ದರ್ಶನ್ ಜೊತೆ ಅಭಿಷೇಕ್ ಕೂಡ ಇರುತ್ತಾರೆ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಕೋಟ್ ನ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗು ತಾಣ ನಾಶ ಮಾಡಿತ್ತು. ಈ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸಿದಾಗ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ -21 ಬಳಸಿ ಪಾಕಿಸ್ತಾನದ ದಾಳಿಯನ್ನು ತಡೆದಿದ್ದರು. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಪಾಕ್ ನ ಎಫ್ -16 ವಿಮಾನವನ್ನುರುಳಿಸಿದ್ದರು.ಆ ಸಂಧರ್ಭದಲ್ಲಿ ಅಭಿನಂದನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಪಾಕ್ ಸೈನಿಕರಿಂದ ಬಂಧನಕ್ಕೊಳಗಾಗಿದ್ದರು. ನಂತರ ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು, ಅಭಿನಂದನ್ ಅವರನ್ನು ಪಾಕ್ ಸುರಕ್ಷಿತವಾಗಿ ಬಿಡುಗಡೆಗೊಳಿಸಿತ್ತು.








