Champion | ವೀರಯೋಧರಿಂದ “ಚಾಂಪಿಯನ್” ಹಾಡುಗಳ ಲೋಕಾರ್ಪಣೆ
ಸ್ನೇಹಿತನಿಂದ ಸ್ನೇಹಿನಿಗಾಗಿ ನಿರ್ಮಾಣವಾಗಿರುವ ಸಿನಿಮಾ.
ಅದು ನಿಜಕ್ಕೂ ಸಿನಿಮಾ ಸಮಾರಂಭ ಅನಿಸುತ್ತಿರಲಿಲ್ಲ. ಅಲ್ಲಿ ಸಿನಿಮಾ ಮಂದಿಗಿಂತ ಹೆಚ್ಚಿದವರು ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಸೇನಾನಿಗಳು.
ಸೇನಾ ವಿಭಾಗದ ಉತ್ಕೃಷ್ಟ ಪ್ರಶಸ್ತಿಗಳಾದ ಪರಮವೀರ ಚಕ್ರ ಪಡೆದ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಮಹಾವೀರ ಚಕ್ರ ಪಡೆದಿರುವ ಪಿ.ಎಸ್.ಗಣಪತಿ ಅವರು ಆ ಸಮಾರಂಭದ ಮುಖ್ಯ ಅತಿಥಿಗಳು.
ಈ ಎಲ್ಲಾ ಅದ್ಭುತ ಕ್ಷಣಗಳು ಸಾಕ್ಷಿಯಾಗಿದ್ದು, ಶಿವಾನಂದ ಎಸ್ ನೀಲಣ್ಣನವರ ನಿರ್ಮಾಣದ, ಶಾಹುರಾಜ್ ಶಿಂಧೆ ನಿರ್ದೇಶನದ “ಚಾಂಪಿಯನ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ.
ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ-ನಾಯಕಿಯಾಗಿ ನಟಿಸಿರುವ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಯೋಗೇಂದ್ರ ಸಿಂಗ್ ಯಾದವ್, ಪಿ.ಎಸ್.ಗಣಪತಿ ಹಾಗೂ ಲಹರಿ ಸಂಸ್ಥೆಯ ವೇಲು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಮಾತಿನ ಭಾಗದ ಚಿತ್ರೀಕರಣ ಮುಗಿಯಿತು. ಐದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಆಗ ಕೊರೋನ ಆಗಮನವಾಯಿತು. ಇದೇ ಸಮಯದಲ್ಲಿ ಅನಿರೀಕ್ಷಿತವೆಂಬಂತೆ ನಮ್ಮ ನಿರ್ದೇಶಕರಾದ ಶಾಹುರಾಜ್ ಶಿಂಧೆ ಸಹ ದೈವಾಧೀನರಾದರು. ಅವರ ನಿಧನದ ನೋವು ಇನ್ನೂ ಮರೆಯಲಾಗುತ್ತಿಲ್ಲ. ನಂತರ ನೃತ್ಯ ನಿರ್ದೇಶಕರ ಸಾಹಾಯದಿಂದ ಹಾಡುಗಳ ಚಿತ್ರೀಕರಣ ಮುಗಿಸಿದ್ದೆವು. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ.
ನಾನು ಬೆಳಗಾವಿಯವನು. ನನ್ನ ತಂದೆ ಸಹ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಇಂದು ಈ ಸಮಾರಂಭಕ್ಕೆ ಆರ್ಮಿ ಅಧಿಕಾರಿಗಳು ಬಂದಿರುವುದು ನನಗೆ ಹೆಮ್ಮೆ. ನಾನು ಬೆಂಗಳೂರಿಗೆ ಬಂದಾಗ ನನ್ನ ಸ್ನೇಹಿತನ ರೂಮಿನಲ್ಲಿ ಇರುತ್ತಿದೆ. ಸುರದ್ರೂಪಿ ಯುವಕ ಅವನು. ನಾನು ಅವನಿಗೆ ಹೇಳುತ್ತಿದ್ದೆ. ನನಗೇನಾದರೂ ಹೆಚ್ಚು ದುಡ್ಡು ಬಂದರೆ, ನಿನ್ನನ್ನು ನಾಯಕನನ್ನಾಗಿ ಮಾಡುತ್ತೇನೆ ಎಂದು. ಹದಿನಾಲ್ಕು ವರ್ಷಗಳ ನಂತರ ಆ ಕಾಲ ಕೂಡಿ ಬಂದಿದೆ. ಕೊಟ್ಡ ಮಾತಿನಂತೆ ನನ್ನ ಗೆಳೆಯ ಸಚಿನ್ ಧನಪಾಲ್ ನನ್ನು ನಾಯಕನನ್ನಾಗಿ ಮಾಡಿದ್ದೇನೆ ಎಂದು ತಮ್ಮ ಸ್ನೇಹದ ಮಹತ್ವ ಸಾರಿದ ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡರು.
ನನ್ನ ಅಪ್ಪ, ಅಣ್ಣ ಎಲ್ಲಾ ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ನಾನು ಆ ಕುರಿತು ಅನೇಕ ಪರೀಕ್ಷೆ ಬರೆದಿದ್ದೇನೆ. ಮಾಡೆಲಿಂಗ್ ನಲ್ಲೂ ಆಸಕ್ತಿ. ಬ್ಯಾಂಕ್ ಉದ್ಯೋಗ ಬಿಟ್ಟು ಈಗ ಚಿತ್ರರಂಗಕ್ಕೆ ಆಗಮಿಸಿದ್ದೇನೆ. ಏನು ಇಲ್ಲದ ಕಾಲದಲ್ಲಿ ನನ್ನ ಹೀರೋ ಮಾಡುತ್ತೀನಿ ಅಂದಿದ್ದ ಗೆಳೆಯ, ಇಷ್ಟು ವರ್ಷಗಳ ನಂತರ ತನ್ನ ಬಳಿ ದುಡ್ಡು ಬಂದಾಗ, ಹೇಳಿದ ಮಾತಿನಂತೆ ನಡೆದುಕೊಂಡಿರುವುದಕ್ಕೆ ಆತನ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಆತನಿಗೆ ನಾನು ಜೀವನ ಪೂರ್ತಿ ಆಭಾರಿ ಎಂದ ನಾಯಕ ಸಚಿನ್ ಧನಪಾಲ್, ಚಿತ್ರದಲ್ಲಿ ಅಭಿನಯಸಲು ಮಾಡಿಕೊಂಡಿದ್ದ ತಯಾರಿ ಬಗ್ಗೆ ತಿಳಿಸಿದರು.
ಛಾಯಾಗ್ರಾಹಕ ಸರ್ವಣನ್ ನಟರಾಜನ್ ಹಾಗೂ ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು.
ಕ್ರೀಡಾ ಉತ್ಸಾಹಿ ಮಲೆನಾಡಿನ ಹುಡುಗನೊಬ್ಬ ಕಷ್ಟಪಟ್ಟು ನ್ಯಾಷನಲ್ ಚಾಂಪಿಯನ್ ಆಗುವುದೇ ಚಿತ್ರದ ಕಥಾಹಂದರ.
ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ದೇವರಾಜ್, ಸುಮನ್, ಪ್ರದೀಪ್ ರಾವತ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಆದಿ ಲೋಕೇಶ್, ಅರುಣಾ ಬಾಲರಾಜ್, ಗಿರಿ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಸರಾಂತ ನಟಿ ಸನ್ನಿಲಿಯೋನ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.