ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನರಿಷತ್ ಗೆ ನಡೆಯುವ ಚುನಾವಣೆಗೆ ಜೆಡಿಯು ಪಕ್ಷದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯ್ತು. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷರಾದ ಮಹಿಮಾ ಜೆ.ಪಟೇಲ್ ಅವರು ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಮಟ್ಟದಿಂದ ನಮ್ಮ ಹೋರಾಟ ನಡೆದಿದೆ. ಗ್ರಾಮ ಸ್ವರಾಜ್ಯ ನಮ್ಮ ಕಲ್ಪನೆ. ಗ್ರಾಮಗಳ ಉದ್ಧಾರವೇ ನಮ್ಮ ಪಕ್ಷ ಧ್ಯೇಯವಾಗಿದೆ ಎಂದರು. ಶಿಕ್ಷಕರ ಪರ ಹಿಂದಿನಿಂದಲೂ ಜೆಡಿಯು ಹೋರಾಟ ಮಾಡುತ್ತಿದೆ. ಪರಿಷತ್ ನಲ್ಲಿ ನಮ್ಮ ಹೋರಾಟ ಮುಂದುವರೆಯಲಿದ್ದು, ಈ ಉದ್ದೇಶದಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಕೋವಿಡ್ ಮಹಾಮಾರಿ ಕಾರಣಕ್ಕೆ ಪರಿಷತ್ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಆದರೆ ನಾವು ಪಕ್ಷದ ವತಿಯಿಂದ ಚಂದ್ರಶೇಖರ್ ವಿ. ಸ್ಥಾವರ ಮಠ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕ ಮಾಡುವ ಕೆಲಸ ನಡೆದಿದೆ. ಜತೆಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆದಿದೆ.
ಚಂದ್ರಶೇಖರ್ ವಿ. ಸ್ಥಾವರ ಮಠ, ಸ್ವತಃ ಶಿಕ್ಷಕರಾಗಿರುವ ಕಾರಣ ಶಿಕ್ಷಕರ ಪರ ಹೋರಾಟ ನಡೆಸಲಿದ್ದಾರೆ. ಸಾಮಾಜಿಕ ಕಳಕಳಿ ಇರುವ ಚಂದ್ರಶೇಖರ್ ವಿ. ಸ್ಥಾವರ ಮಠ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡಲಿದ್ದಾರೆ ಎಂದರು.
ಪಕ್ಷ ಸಂಘಟನೆ ಎಂದರೆ ಪ್ರತಿಭಟನೆ , ಹೋರಾಟ ಮಾತ್ರ ಅಲ್ಲ. ಅದಕ್ಕೆ ಒಂದು ಮೂಲ ಉದ್ದೇಶ ಇರಬೇಕು. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಜೆಡಿಯು ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲಿ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದವರ ಸ್ಥಿತಿ ಸುಧಾರಿಸಿದರೆ ದೇಶದ ಸ್ಥಿತಿ ಸುಧಾರಣೆ ಆಗುತ್ತದೆ. ಆದರೆ, ಇತ್ತೀಚಿನ ಸರ್ಕಾರಗಳು ಗ್ರಾಮೀಣ ಪ್ರದೇಶದವರನ್ನು ಬಿಕಾರಿಗಳನ್ನಾಗಿ ಮಾಡಿವೆ. ರೈತರನ್ನು, ಹಳ್ಳಿಯವರಿಗೆ ಒಂದಷ್ಟು ಹಣ, ಕೊಡುಗೆ ಕೊಟ್ಟು ಅವರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿವೆ. ಹೀಗಾಗಿ ಈ ಮಾರ್ಗ ಬಿಟ್ಟು ಗ್ರಾಮಗಳನ್ನು ಸಶಕ್ತೀಕರಣ ಮಾಡಲು ಗ್ರಾಮಸ್ವರಾಜ್ ಕಲ್ಪನೆಯೊಂದಿಗೆ, ಪಂಚಾಯತ್ ರಾಜ್ ವ್ಯವಸ್ಥೆ ಭದ್ರಪಡಿಸಲು ಗ್ರಾಮೀಣ ಪ್ರದೇಶಗಳಿಗೆ ನೇರವಾಗಿ ಪಕ್ಷ ಸಂಘಟನೆಗೆ ಹೋಗುತ್ತಿದ್ದೇವೆ ಎಂದು ಮಹಿಮಾ ಪಾಟೀಲ್ ವಿವರ ನೀಡಿದರು.
ಬಳಿಕ ಜೆಡಿಯು ಅಭ್ಯರ್ಥಿ ಚಂದ್ರಶೇಖರ್ ವಿ. ಸ್ಥಾವರ ಮಠ ಮಾತನಾಡಿ, ಹಿಂದೆ ನಾವು ಶಿಕ್ಷಕರನ್ನು ಸೃಷ್ಟಿಕರ್ತ ಬ್ರಹ್ಮನಿಗೆ ಹೋಲಿಸುತ್ತಿದ್ದೆವು. ಉತ್ತಮ ರಾಷ್ಟ್ರವನ್ನು, ಸಮಾಜವನ್ನು ಕಟ್ಟುವಂತಹ ಶಕ್ತಿ ಹೊಂದಿದ್ದ ಶಿಕ್ಷಕರನ್ನು 70ರ ದಶಕದ ನಂತರ ಅಧಿಕಾರಕ್ಕೆ ಬಂದ ಸರ್ಕಾರರಗಳು ಶಿಕ್ಷಕರನ್ನು ಕಡೆಗಣನೆ ಮಾಡುತ್ತಾ ಬಂದಿವೆ. ಇಂದು ಶಿಕ್ಷಕರ ಸ್ಥಿತಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕೋವಿಡ್ ನಿಂದ ರಾಜ್ಯಾದ್ಯಂತ 35 ಸಾವಿರ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹಲವು ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಈ ನಿಟ್ಟಿನಲ್ಲಿ ಜೆಡಿಯುನಿಂದ ಜ್ಯೋತಿ ಯಾತ್ರೆ ಆರಂಭಿಸುತ್ತಿದ್ದೇವೆ. ಪಕ್ಷದ ಕಚೇರಿಯಿಂದ ಜ್ಯೋತಿ ಯಾತ್ರೆ ಆರಂಭಿಸಿ ಮುಖ್ಯಮಂತ್ರಿಗಳ ಕಚೇರಿವರೆಗೆ ತೆರಳಿ ಮನವಿ ನೀಡುವ ಮೂಲಕ ಜನಾಭಿಯಾನ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಜೆಡಿಯು ನ ಯುವ ಘಟಕ ಕಾರ್ಯಾಧ್ಯಕ್ಷ ಡಾ. ನಾಗರಾಜ್, ಬೆಂಗಳೂರು ಜೆಡಿಯು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ದಾವೂದ್ ಖಾನ್, ಭವ್ಯ ವಿಶ್ವನಾಥ್, ಈ ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.