ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ : ಸಿ.ಟಿ.ರವಿ ಒತ್ತಾಯ
ಬೆಂಗಳೂರು : ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇ.ಧ್ಯಾನ್ ಚಂದ್ ಪ್ರಶಸ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಇದರ ಬಗ್ಗೆ ದೇಶದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಕರ್ನಾಟಕದಲ್ಲಿಯೂ ಹೆಸರುಗಳ ಬದಲಾವಣೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವಂತೆ ನಾನು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇನೆ. ಕನ್ನಡಿಗರು ತಿಂಡಿ ಸೇವಿಸುವ ವೇಳೆ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ನೆನಪಿಸುವ ಅಗತ್ಯ ಇಲ್ಲ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಧ್ಯಾನ್ ಚಂದ್ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಹಿನ್ನೆಲೆ ಸಿ.ಟಿ. ರವಿ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ ಹೆಸರನ್ನೂ ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.









