ಕೆಳಗಿನ ಚಿತ್ರದಲ್ಲಿರುವ ಮಹಿಳೆಯರ ಹೆಸರು (Charlotte ) ಚಾರ್ಲೊಟ್ ಆ‌್ಯನ್ ಮೊಬರ್ಲಿ ಹಾಗೂ ಎಲಿನೋರಾ (Jordan) ಜೋರ್ಡಿಯನ್ (Charlotte – Jordan) ಎಂದು. ಇಬ್ಬರೂ ಸಹ ಬ್ರಿಟನ್ ದೇಶದವರು. ಸಮಯ ಯಾತ್ರೆಯ ಅನುಭವಗಳಲ್ಲಿ ಈ ಇಬ್ಬರು ಮಹಿಳೆಯರಿಗಾದ ಒಂದು ರೋಚಕ ಅನುಭವವು ಬಹಳ ಕಾಲದವರೆಗೆ ಚರ್ಚೆಗೊಳಗಾಗಿತ್ತು. ( Charlotte – Jordan)
ಈ ಘಟನೆ ನಡೆದದ್ದು 1901 ರ ಆಗಸ್ಟ್ 10 ನೇ ತಾರೀಖಿನಂದು. ಫ್ರೆಂಚ್ ಕ್ರಾಂತಿಯ ಕರಾಳ ಚರಿತ್ರೆಗೆ ಸಾಕ್ಷಿಯಾದ ಅಲ್ಲಿನ ವರ್ಸೇಲ್ಸ್ ಅರಮನೆಯ ಸುತ್ತ ವಿಸ್ತಾರವಾದ ಹೂದೋಟವನ್ನ ಬೆಳೆಸಲಾಗಿತ್ತು. ಅದನ್ನು ನೋಡಲೆಂದೇ ಆ ವರ್ಷ ದೇಶವಿದೇಶಗಳಿಂದ ಜನ ಬರತೊಡಗಿದ್ದರು. ಹಾಗೆ ಬಂದವರಲ್ಲಿ ಈ ಘಟನೆಯ ವಿಚಿತ್ರ ಸ್ಥಿತಿಗೆ ಸಿಲುಕಿದ ಈ ಇಬ್ಬರು ಬ್ರಿಟೀಷ್ ಮಹಿಳೆಯರೂ ಇದ್ದರು.
ಆನೆ ಮಾಬರ್ಲಿ ಎಂಬಾಕೆ ಲಂಡನ್ನಿನ ಆಕ್ಸ್ ಫರ್ಡ್ ಸೇಂಟ್ ಹುಗ್ಸ್ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್. ಹಾಗೂ ಎಲಿನೋರಾ ಎಂಬಾಕೆ ಅದೇ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಆಗಿದ್ದಾಕೆ. ಎಲ್ಲ ಪ್ರವಾಸಿಗಳಂತೆ ಇವರೂ ಸಹ ಆ ವರ್ಷ ಫ್ರಾನ್ಸಿನ ಅರಮನೆ ಹಾಗೂ ಹೂದೋಟವನ್ನ ವೀಕ್ಷಿಸಲು ಇಂಗ್ಲೆಂಡಿನಿಂದ ಫ್ರಾನ್ಸಿಗೆ ಬಂದಿದ್ದರು. ಆ ಭವ್ಯ ಅರಮನೆ ಹಾಗೂ ವಿಸ್ತಾರವಾದ ಹೂದೋಟವನ್ನೆಲ್ಲ ಸುತ್ತಾಡಿ ಪಕ್ಕದ ಇನ್ನೊಂದು ಚಿಕ್ಕ ಅರಮನೆಯನ್ನ ನೋಡಿ ಬರಲು ತೀರ್ಮಾನಿಸಿ ಅತ್ತ ಹೊರಟರು. ಅದು ಫ್ರೆಂಚ್ ಕ್ರಾಂತಿಯ ಕಾಲದ ಆಗಿನ ರಾಣಿ ಮೇರಿ ಆಂಟಾಯ್ನೆಟ್ ಳ ರಾಣೀವಾಸ. ಅವಳ ಅಂತಿಮ ದಿನಗಳನ್ನ ಆಕೆ ಅಲ್ಲಿಯೇ ಓರ್ವ ಬಂಧಿಯಂತೆ ಕಳೆದಳಂತೆ.
ಆ ಚಿಕ್ಕ ಅರಮನೆ ಕಡೆ ಈ ಇಬ್ಬರೂ ಬ್ರಿಟೀಷ್ ಮಹಿಳೆಯರು ಅದೂ ಇದೂ ಹರಟುತ್ತಾ ಹೆಜ್ಜೆ ಹಾಕಲಾರಂಭಿಸಿದರು. ಮಾತಾಡುತ್ತಾ ಮಾತಾಡುತ್ತಾ ತಾವು ಎಲ್ಲೋ ದಾರಿ ತಪ್ಪಿದಂತೆ ಅವರಿಗೆ ಅನ್ನಿಸಿತು. ಅವರಿಗೆ ಆ ಕ್ಷಣ ಎಂಥ ಭ್ರಾಂತಿ ಕಾಡಿತೆಂದರೆ ತಾವು ವಾಸ್ತವ ಲೋಕದಿಂದ ಎತ್ತಲೋ ಜಿಗಿದು ಕನಸಿನಲ್ಲಿ ಚಲಿಸುತ್ತಿರುವಂತೆಯೇ ಕೆಲ ಹೊತ್ತು ಭಾಸವಾಯ್ತೆಂದೂ ಮನಸಿನಲ್ಲಿ ಆಗ ಅಸಹಜ ಭಯ. ದುಗುಡಗಳು ಉಂಟಾದವೆಂದೂ ಈ ಅನುಭವಕ್ಕೊಳಗಾದ ಎಲಿನೋರ ಒಂದೆಡೆ ಬರೆಯುತ್ತಾಳೆ ! ಇಬ್ಬರೂ ಹೀಗೇ ಒಟ್ಟಿಗೆ ನಡೆಯುತ್ತಿರಬೇಕಾದರೆ ಮುಂದೆ ಕೊಂಚ ದೂರದಲ್ಲಿ ಗೊಬ್ಬರ ತುಂಬಿದ ಪುಟ್ಟ ಚಕ್ರದ ಗಾಡಿಯ ಬಳಿ ಯಾರೋ ಇಬ್ಬರು ನಿಂತಿರುವುದು ಕಾಣಿಸುತ್ತೆ. ಉದ್ದುದ್ದ ನಿಲುವಂಗಿಗಳನ್ನೂ ಮೂರು ಮೂಲೆಯ ವಿಚಿತ್ರ ಹ್ಯಾಟುಗಳನ್ನೂ ತೊಟ್ಟಿದ್ದ ಆ ವ್ಯಕ್ತಿಗಳು ಸ್ಥಳೀಯ ತೋಟದ ಮಾಲಿಗಳಿರಬೇಕೆಂದೇ ಭಾವಿಸಿದ ಈ ಮಹಿಳೆಯರು ರಾಣೀವಾಸದತ್ತ ದಾರಿ ಕೇಳಿದಾಗ ಕೊಂಚ ಮುಂದೆ ಹೋಗಿರೆಂದು ಆ ವ್ಯಕ್ತಿಗಳು ಸೂಚಿಸ್ತಾರೆ.
ಇತಿಹಾಸ ಮರೆತಿರುವ ಕಾಳುಮೆಣಸಿನ ರಾಣಿ ಅಥವಾ ಗಂಡು ರಾಣಿ ಚೆನ್ನಭೈರಾದೇವಿಯ ಸಂಕ್ಷಿಪ್ತ ಕಥನ
ಹಾಗೆಯೇ ಮುಂದುವರಿದಾಗ ಅಲ್ಲೊಂದು ಬ್ಯಾಂಡ್ ಸ್ಟ್ಯಾಂಡ್ ಇದ್ದುದು ಕಣ್ಣಿಗೆ ಬಿತ್ತು. ಅದರ ಬಳಿ ಅಗಲವಾದ ಹ್ಯಾಟ್ ತೊಟ್ಟಿದ್ದ ವ್ಯಕ್ತಿಯೊಬ್ಬ ಕುಳಿತಿದ್ದ.. ಅವನ ವಿಚಿತ್ರ ವೇಷ ಭೂಷಣದ ಜತೆ ಅವನ ವಿಚಿತ್ರ ಮುಖ ಭಾವ ಈ ಮಹಿಳೆಯರನ್ನ ಇರುಸು ಮುರುಸಾಗುವಂತೆ ಮಾಡಿತು. ಆತನನ್ನ ಮಾತಾಡಿಸದೆ ಮುಂದುವರಿದ ಅವರಿಗೆ ತಾವು ಇಲ್ಲಿಗೆ ಬರುವಾಗ ಈ ವೇಷಧಾರಿಗಳ್ಯಾರೂ ಕಾಣಲಿಲ್ಲ. ಈಗೆಲ್ಲಿಂದ ಬಂದರೆಂಬ ಅನುಮಾನ ಶುರುವಾಗಿತ್ತು. ಬಹುಶಃ ಫ್ರಾನ್ಸ್ ಸರ್ಕಾರ ತನ್ನ ಕ್ರಾಂತಿಯ ಸ್ಮರಣಾರ್ಥ ಬಂದಂಥ ಪ್ರವಾಸಿಗರನ್ನ ರಂಜಿಸಲು ಅಲ್ಲಲ್ಲಿ ಇಂಥ ಜನರನ್ನಿಟ್ಟಿರಬಹುದೆಂದೇ ಅವರು ಭಾವಿಸಿದರು.

ಹಾಗೆಯೇ ನಡೆಯುತ್ತಿದ್ದಾಗ ಎದುರಿಗೆ ರಾಣೀವಾಸವು ಕಂಡಿತು. ಆದರೆ ಸುತ್ತಲಿನ ಪ್ರದೇಶವೆಲ್ಲ ನಾಟಕೀಯವಾಗಿ ಬದಲಾದಂತಿತ್ತು. ತಾವು ಈ ಮುನ್ನ ಬಂದಾಗ ಇದ್ದಂಥ ವಾತಾವರಣವೇ ಧಿಡೀರ್ ಬದಲಾಗಿದೆಯೇನೋ ಎಂಬಂತೆ ತೋರಿತು !! ರಾಣೀವಾಸದ ಬಳಿ ಬರುತ್ತಿದ್ದಂತೆ ಅದರ ಬಾಗಿಲ ಬಳಿ ಓರ್ವ ಹೆಣ್ಣು ಕುಳಿತು ಚಿತ್ರ ಬಿಡಿಸುವಲ್ಲಿ ಮಗ್ನಳಾಗಿದ್ದವಳು ಈ ಮಹಿಳೆಯರನ್ನು ಕಂಡವಳೇ ದುರುಗುಟ್ಟಿದಳು. ಅವಳು ನೋಡಲು ಆಕರ್ಷಕವಾಗಿದ್ದಳಾದರೂ ಅವಳು ತೊಟ್ಟಿದ್ದ ಉಡುಪು ಕೊಳೆಯಾಗಿತ್ತೆಂದೂ ಹಾಗೂ ಅದು ಹಳೇ ಕಾಲದ ಉಡುಪಿನಂತಿತ್ತೆಂದೂ ಈ ಮಹಿಳೆಯರು ಡೈರಿಯಲ್ಲಿ ಈ ಅನುಭವದ ಕುರಿತು ಬರೀತಾರೆ.
ಈ ಅಸಹಜತೆಗಳ ನಡುವೆಯೂ ಅವರು ಆ ಅರಮನೆಯೊಳಕ್ಕೆ ಅಂತೂ ಕಾಲಿಟ್ಟಾಗ ಅಲ್ಲಿ ಯಾವುದೋ ಮದುವೆಯ ಸಿದ್ಧತೆ ನಡೆಯುತ್ತಿರುವಂತೆ ಕಂಡಿತು. ಮದುವೆಯ ಗಂಡು ಹೆಣ್ಣು ಕೈ ಕೈ ಹಿಡಿದು ನಡೆದು ಬಂದಾಗ ಸಭಾಹ್ವಾನಿತರು ಸಂಭ್ರಮಿಸಿದಾಗ ಈ ಮಹಿಳೆಯರ ಮನೋ ದುಗುಡ ಕಡಿಮೆಯಾಯ್ತಂತೆ. ಅವರು ಆ ಅರಮನೆಯಿಂದ ಹೊರ ಬಂದಾಗ ಅಲ್ಲಿ ಚಿತ್ರ ಬಿಡಿಸುತ್ತಿದ್ದ ಆ ಹೆಣ್ಣಾಗಲೀ ಅವಳ ಚಿತ್ರದ ಬೋರ್ಡ್ ಆಗಲೀ. ರಸ್ತೆಯಲ್ಲಿ ವಿಚಿತ್ರ ವೇಷಧಾರಿಗಳಾಗಲೀ ಯಾರೂ ಇರಲಿಲ್ಲ !!
ಇದಾಗಿ ಕೆಲ ದಿನಗಳ ಬಳಿಕ ಈ ಘಟನೆಯನ್ನ ಆನೆ ಮಾಬರ್ಲಿ ಬರೆದು ಪ್ರಕಟಿಸಿದಾಗ. ಅದನ್ನೋದಿದ ಆ ದಿನ ಅಲ್ಲಿಗೆ ಬಂದಿದ್ದ ಇತರೆ ಪ್ರವಾಸಿಗರು ಆಕೆಯನ್ನ ಸಂಪರ್ಕಿಸಿ ಆ ದಿನ ತಮಗೆ ಆ ಥರದ ವಿಚಿತ್ರ ವೇಷದವರ್ಯಾರೂ ಕಾಣಲಿಲ್ಲವಲ್ಲ ಎಂದು ತಿಳಿಸಿದಾಗ ಮಾಬರ್ಲಿ ಮೂಕವಿಸ್ಮಿತಳಾಗುತ್ತಾಳೆ ! ಇವರ ಈ ವಿಚಿತ್ರ ಅನುಭವ ಮೆಲ್ಲನೆ ಹಬ್ಬುತ್ತಿದ್ದಂತೆ ಈ ಅನುಭವದ ಕುರಿತು ನಡೆದ ಮುಂದಿನ ಅಧ್ಯಯನಗಳು ನಂಬಲಸಾಧ್ಯವಾದ ವರದಿಗಳೊಡನೆ ದಾಖಲಾದವು !
ಒಂದು..
ಆ ದಿನ ಫ್ರಾನ್ಸ್ ದೇಶದ ಮಟ್ಟಿಗಂತೂ ಬಹು ಮುಖ್ಯವಾದ ದಿನ. ಹಾಗಾಗಿ ಆ ದಿನ ಏನೇ ವಿಶೇಷ ನಡೆದರೂ ಅದು ಯಾರಿಗಾದರೂ ತಿಳಿದೇ ಇರುತ್ತದೆ. ಆ ದಿನದ ಎಲ್ಲಾ ವರದಿಗಳನ್ನೂ ಸಂಗ್ರಹಿಸಿದರೂ ಯಾವೊಂದರಲ್ಲೂ ವೇಷಧಾರಿಗಳು ಈ ಮಹಿಳೆಯರನ್ನ ಹೊರತು ಪಡಿಸಿ ಅಂದು ಬೇರೆ ಯಾರಿಗೂ ಕೂಡ ಕಾಣಿಸಿರಲಿಲ್ಲ ಹಾಗೂ ಅಂತಹ ವೇಷಧಾರಿಗಳೇ ಇರಲಿಲ್ಲ !!
ಇನ್ನೊಂದು..
ಆ ದಿನ ಫ್ರಾನ್ಸ್ ಸರ್ಕಾರ ಈ ಥರದ ಬೇರೆ ಯಾರನ್ನೂ ರಂಜಿಸಲು ನೇಮಿಸಿರಲಿಲ್ಲ ಹಾಗೂ ಸುತ್ತಲಿನ ಪ್ರದೇಶವನ್ನ ಅಲಂಕರಿಸಿರಲೂ ಇರಲಿಲ್ಲ ! ಹಾಗಾದರೆ ಈ ಮಹಿಳೆಯರ ವಾದವೇ ಅಪ್ರಸ್ತುತವೇ ? ಸಮಾಜದ ಅತ್ಯುಚ್ಛ ಸ್ಥಾನದಲ್ಲಿರುವ ಅವರೇಕೆ ಹೀಗೆ ಕಥೆ ಕಟ್ಟಬೇಕು ?? ಇದು ಭ್ರಮೆಯೇ ಆದರೂ ಇಬ್ಫರಿಗೂ ಏಕಕಾಲಕ್ಕೆ ಒಂದೇ ಥರದ ಭ್ರಮೆ ಕಾಡಲು ಸಾಧ್ಯವೇ ?
ಅವರು ಸರಿಸುಮಾರು ಒಂದು ಶತಮಾನದಷ್ಟು ಹಿಂದೆ ಸರಿದು. ಕೊಂಚ ಹೊತ್ತು ಭೂತಕಾಲದಲ್ಲಿ ಅಡ್ಡಾಡಿ ಪುನಃ ವರ್ತಮಾನಕ್ಕೆ ಬಂದಿದ್ದರು !ಅವರು ಕಂಡ ವೇಷಧಾರಿಗಳ ಉಡುಪು ಒಂದು ಶತಮಾನದ ಹಿಂದೆ ಫ್ರಾನ್ಸ್ ನಲ್ಲಿ ಪ್ರಚಲಿತದಲ್ಲಿದ್ದ ಸಾಂಪ್ರದಾಯಿಕ ಉಡುಗೆ.. ! ಇನ್ನಷ್ಟು ರೋಚಕದ ಸಂಗತಿಯೆಂದರೆ ಆ ಚಿಕ್ಕ ಅರಮನೆಯ ಎದುರು ಅವರು ಕಂಡ ಚಿತ್ರ ಬರೆಯುತ್ತಿದ್ದ ಹೆಣ್ಣು ಬೇರಾರೂ ಆಗಿರದೆ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಪ್ರಜೆಗಳ ಕೋಪಕ್ಕೆ ಸಿಲುಕಿ ಗಿಲೋಟಿನ್ ಗೆ ಬಲಿಯಾದ ಅಂದಿನ ‘ದುಂದು ವೆಚ್ಚದ ರಾಣಿ’ಯೆಂದೆ ಹೆಸರಾಗಿದ್ದ ಮೇರಿ ಅಂಟಾಯ್ನೆಟ್ಟಳೇ ಇರಬೇಕೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ !
ರೊಚ್ಚಿಗೆದ್ದಿದ್ದ ಫ್ರಾನ್ಸಿನ ಪ್ರಜೆಗಳು ತಮ್ಮ ಹಿತಾಸಕ್ತಿಯನ್ನು ಕಡೆಗಣಿಸಿ ಮೆರೆಯುತ್ತಿದ್ದ ಈ ರಾಣಿಯ ವಿರುದ್ಧ ಸಾಮೂಹಿಕವಾಗಿ ತಿರುಗಿ ಬಿದ್ದು ಆಕೆಯನ್ನ ಬಂಧಿಸಿ ಅದೇ ಗೃಹದಲ್ಲಿ ಬಂಧಿಸಿಟ್ಟ ವಿವರವು ಚರಿತ್ರೆಯ ಪುಟದಲ್ಲಿರುವುದೂ ಸಹ ಈ ಘಟನೆಗೆ ಆಧಾರವಾಗಿದೆ. ಬ್ರಿಟೀಷ್ ಮಹಿಳೆಯರ ಈ ಅನುಭವವನ್ನ ಬೇರೆ ಯಾವ ರೀತಿಯಲ್ಲೂ ಸಹ ವಿಶ್ಲೇಷಿಸಲು ಸಾಧ್ಯವಾಗಿಲ್ಲ. ಅವರು ಒಂದು ಶತಮಾನದಶ್ಟು ಹಿಂದಕ್ಕೆ ಸರಿದು ಬಂದದ್ದೇ ನಿಜವಾದ ಪಕ್ಷದಲ್ಲಿ ಅದು ಸಾಧ್ಯವಾದದ್ದಾದರೂ ಹೇಗೆ ?
ವಾತಾವರಣದ ಯಾವ ಒತ್ತಡವು ಅವರನ್ನು ಒಮ್ಮೆಲೇ ಕಾಲ ದೇಶದ ಇನ್ನೊಂದು ಆಯಾಮಕ್ಕೆ ಎಳೆದೊಯ್ದಿತು ? ಪ್ರಾಯೋಗಿಕವಾಗಿ ಇದು ಸಾಧ್ಯವೇ ? ಹಾಗಿದ್ದರೆ ನಾವು ನೀವು ನಂಬಿರುವ ಈ ‘ಕಾಲ’ ಎಂಬ ಪರಿಕಲ್ಪನೆಯ ನಿಜವಾದ ಅರ್ಥವೇನು ? ಇಂಥ ಇನ್ನಷ್ಟು ಪ್ರಶ್ನೆಗಳು ಇನ್ನೂ ನಿರುತ್ತರವಾಗೇ ಉಳಿದಿವೆ !
ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








