ಭಾರತದಿಂದ ಮೋಸ – ನೇಪಾಳದ ಪ್ರಧಾನಿಯಿಂದ ಭಾರತದ ಮೇಲೆ ಆರೋಪಗಳ ಸುರಿಮಳೆ

ಕಠ್ಮಂಡ್, ಜೂನ್ 11: ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಒಲಿ ಅವರು ಭಾರತದ ವಿರುದ್ಧ ಆರೋಪದ ಸುರಿಮಳೆಗೈದಿದ್ದಾರೆ. ಭಾರತವು ಸುಳ್ಳು ಕಾಳಿ ನದಿಯನ್ನು ತೋರಿಸಿ, ಸೇನೆಯನ್ನು ತಂದಿರಿಸಿ ಮೋಸ ಮಾಡಿದೆ. ನಮಗೆ ಸೇರಿದ ಭೂಪ್ರದೇಶಗಳನ್ನು ತನ್ನದೆಂದು ಸಾಧಿಸಿ ತೋರಿಸುತ್ತಿದೆ ಎಂದು ಆರೋಪಗಳ ಪಟ್ಟಿಯನ್ನು ಮಾಡಿದೆ.
ನೇಪಾಳದ ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಮಯದಲ್ಲಿ ಭಾರತದ ಮೇಲೆ ಆರೋಪದ ಪಟ್ಟಿಗಳನ್ನು ಮಾಡಿದ ಪ್ರಧಾನಿ ಕೆ.ಪಿ ಶರ್ಮ ಒಲಿ ಅವರು ಭಾರತ ತನ್ನದೆಂದು ಮೋಸದಿಂದ ಹೇಳಿಕೊಳ್ಳುತ್ತಿರುವ ಭೂಪ್ರದೇಶಗಳನ್ನು ನೇಪಾಳ ಮರಳಿ ತನ್ನ ಸುಪರ್ದಿಗೆ ಪಡೆದುಕೊಳ್ಳಲಿದೆ. ಇದು ದೇಶದ ಪ್ರಮುಖ ವಿಚಾರಗಳಲ್ಲಿ ಒಂದು ಎಂದು ತಿಳಿಸಿದರು.
ಭಾರತ ಕಾಲಾಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ಆಕ್ರಮವಾಗಿ ಕಬಳಿಸಿದ್ದು, ತನ್ನ ಭೂಪಟಗಳಲ್ಲಿ ತೋರಿಸುತ್ತಿದೆ ಎಂದ ಒಲಿ ನೇಪಾಳ ಆ ಪ್ರದೇಶಗಳನ್ನು ಮತ್ತೆ ತನ್ನ ವಶಕ್ಕೆ ಪಡೆದುಕೊಳ್ಳಲಿದೆ ಎಂದು ಹೇಳಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ, ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು ಎಂದು ಹೇಳಿಕೆ ನೇಪಾಳದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದು ಹೇಳಿದರು.

ನೇಪಾಳದಲ್ಲಿ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಭೂಪಟ ಪರಿಷ್ಕರಿಸುವ ಪ್ರಸ್ತಾಪಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸರಿತಾ ಗಿರಿ ಅವರಿಗೆ ಮಾಧೆಸ್ ಸೆಂಟ್ರಿಕ್ ಸಮಾಜವಾದಿ ಪಕ್ಷವು ಶಿಸ್ತುಕ್ರಮದ ಎಚ್ಚರಿಕೆ ನೀಡಿ, ಕಾಯ್ದೆಯನ್ನು ಬೆಂಬಲಿಸುವಂತೆ ಆದೇಶಿಸಿದೆ.








