ಕೋಮಾ ಸ್ಥಿತಿಯಲ್ಲಿರುವ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರ ಕೂದಲು ಮತ್ತು ಕೈಗಳಲ್ಲಿ ರಾಸಾಯನಿಕ ವಸ್ತು ಪತ್ತೆ
ಸೈಬಿರಿಯಾ, ಅಗಸ್ಟ್21: ಪ್ರಮುಖ ಅಂತಾರಾಷ್ಟ್ರೀಯ ಬೆಳವಣಿಗೆಯೊಂದರಲ್ಲಿ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರ ಕೂದಲು ಮತ್ತು ಕೈಗಳಲ್ಲಿ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕ ವಸ್ತು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸೈಬಿರಿಯಾ ಪ್ರಾಂತ್ಯದ ಆರೋಗ್ಯ ಸಚಿವಾಲಯ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದೆ.
ರಷ್ಯಾದ ವಿರೋಧ ಪಕ್ಷದ ರಾಜಕಾರಣಿ ಅಲೆಕ್ಸಿ ನವಲ್ನಿ ಕೋಮಾ ಸ್ಥಿತಿಯಲ್ಲಿದ್ದಾರೆ ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 44 ವರ್ಷದ ವೈರಿ ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ಹಿಂತಿರುಗುತ್ತಿದ್ದ ವೇಳೆ ಅವರು ವಿಮಾನದಲ್ಲಿ ಅನಾರೋಗ್ಯಕ್ಕೆ ಒಳಗಾದರು ಮತ್ತು ವಿಮಾನವನ್ನು ಓಮ್ಸ್ಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುರುವಾರ ಮುಂಜಾನೆ ವಿಮಾನ ಹತ್ತುವ ಮೊದಲು ಅವರು ವಿಮಾನ ನಿಲ್ದಾಣದ ಕೆಫೆಯೊಂದರಲ್ಲಿ ಕುಡಿದ ಚಹಾದಲ್ಲಿ ವಿಷಪ್ರಾಶನ ಮಾಡಿರಬಹುದು ಎಂದು ಶಂಕಿಸಲಾಗಿತ್ತು.
ಇದೀಗ ಅಲೆಕ್ಸಿ ನವಲ್ನಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಒಮ್ಸ್ಕ್ ನಗರದ ಆಸ್ಪತ್ರೆಯ ವೈದ್ಯ ಅಲೆಕ್ಸಾಂಡರ್ ಮುರಾವ್‌ಸ್ಕೊವ್ಕಿ ಶುಕ್ರವಾರ ಬೆಳಗ್ಗೆ ಸುದ್ದಿಗಾರರಿಗೆ ಮಾತನಾಡಿ, ಅಲೆಕ್ಸಿ ಅವರ ಬಟ್ಟೆ ಮತ್ತು ಬೆರಳುಗಳಲ್ಲಿ ಕೈಗಾರಿಕಾ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ನಂತರ ಆರೋಗ್ಯ ಸಚಿವಾಲಯವೂ ಇದೇ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.