ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ – ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ತಮಿಳುನಾಡು ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಶಾಲಾ ಕಾಳೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಲವು ಕಡೆಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿದ್ದು, ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪೆಟ್ಟು ಜಿಲ್ಲೆಗಳಲ್ಲಿನ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಹೊರಡಸಿದ ನಂತರ ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗಿದೆ.
ಈ ನಾಲ್ಕು ಜಿಲ್ಲೆಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲ್ಪಡುತ್ತವೆ. ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ವರದಿಗಳ ಪ್ರಕಾರ, ಸಧ್ಯ ಚೆನ್ನೈ ಮತ್ತು ನೆರೆಯ ಪ್ರದೇಶಗಳಲ್ಲಿ ಮಳೆ ನಿಂತಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಸಾಧಾರಣ ಮಳೆ ಇನ್ನೂ ನಿರೀಕ್ಷಿಸಲಾಗಿದೆ.
ಡಿಜಿಪಿ ಕಚೇರಿ ಬಳಿಯ ಎರಡು ಪ್ರದೇಶಗಳಲ್ಲಿ ಮತ್ತು ನುಂಗಂಬಾಕ್ಕಂನಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದ್ದು, ನಾಲ್ಕು ಸ್ಥಳಗಳಲ್ಲಿ 19 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ತಿರುವಳ್ಳೂರು ಜಿಲ್ಲಾಧಿಕಾರಿ, ಜಲಾನಯನದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ಹಿಲ್ಸ್ ಟ್ಯಾಂಕ್ನಿಂದ 750 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಒಳಹರಿವು ಸುಮಾರು 2000 ಕ್ಯೂಸೆಕ್ನಷ್ಟಿದೆ. ಹೆಚ್ಚುವರಿ ನಾಲೆಯ ದಡದಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರವಾಗಿರಿ.” ಎಂದು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನೈನ ಹಲವು ಏರಿಯಾಗಳಿಗೆ ಬೇಟಿ ಕೊಟ್ಟು ಪರಿಶೀಲಿಸಿದರು. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕಚೇರಿಯಲ್ಲಿನ ಪ್ರವಾಹ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.