ಚೆನ್ನೈ ಟೆಸ್ಟ್ – ಫಾಲೋ ಆನ್ ಹೇರುವ ಧೈರ್ಯ ಮಾಡದ ಇಂಗ್ಲೆಂಡ್.. ಟೀಮ್ ಇಂಡಿಯಾಗೆ 241 ರನ್ ಗಳ ಹಿನ್ನಡೆ
ಟೀಮ್ ಇಂಡಿಯಾ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ಗೆ ಸಿಲುಕಿದ್ರೂ ಆಂಗ್ಲರು ಫಾಲೋ ಆನ್ ಹೇರುವ ಧೈರ್ಯ ಮಾಡಲಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 578 ರನ್ ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 337 ರನ್ ಗೆ ಆಲೌಟ್ ಆಗಿದೆ. ಅಲ್ಲದೆ 241 ರನ್ ಗಳ ಹಿನ್ನಡೆಯನ್ನು ಅನುಭವಿಸಿದೆ.
ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟದ ಆರಂಭದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಆರ್. ಅಶ್ವಿನ್ ಅವರು ಬಿರುಸಿನ ಆಟವನ್ನೇ ಆಡಿದ್ರು. ಆದ್ರೆ ಆರ್. ಅಶ್ವಿನ್ ಅವರು 31ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಇದಕ್ಕು ಮುನ್ನ ವಾಷಿಂಗ್ಟನ್ ಸುಂದರ್ ಮತ್ತು ಅಶ್ವಿನ್ ಅವರು ಏಳನೇ ವಿಕೆಟ್ ಗೆ 80 ರನ್ ಕಲೆ ಹಾಕಿದ್ರು.
ನಂತರ ಶಹಬಾಝ್ ನದೀಮ್ ಶೂನ್ಯ ಸುತ್ತಿದ್ರೆ, ಇಶಾಂತ್ ಶರ್ಮಾ ನಾಲ್ಕು ರನ್ ಗೆ ಸೀಮಿತವಾದ್ರು. ಇನ್ನೊಂದೆಡೆ ಜಸ್ಪ್ರಿತ್ ಬೂಮ್ರಾ ಕೂಡ ಶೂನ್ಯ ಸುತ್ತಿದ್ರು.
ಈ ನಡುವೆ ವಾಷಿಂಗ್ಟನ್ ಸುಂದರ್ ತನ್ನ ತವರು ನೆಲದಲ್ಲಿ ಮನಮೋಹಕ ಆಟದ ಮೂಲಕ ಗಮನ ಸೆಳೆದ್ರು. 138 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 85 ರನ್ ದಾಖಲಿಸಿದ್ರು.
ಅಂತಿಮವಾಗಿ ಟೀಮ್ ಇಂಡಿಯಾ 337 ರನ್ ಗೆ ತನ್ನ ಮೊದಲ ಇನಿಂಗ್ಸ್ ಗೆ ಮಂಗಳ ಹಾಡಿತ್ತು. ಇಂಗ್ಲೆಂಡ್ ಪರ ಡಾಮಿನಿಕ್ ಲೀಚ್ ನಾಲ್ಕು ವಿಕೆಟ್ ಪಡೆದ್ರೆ, ಜೇಮ್ಸ್ ಆಂಡರ್ಸನ್ , ಜೋಫ್ರಾ ಆರ್ಚೆರ್, ಜಾಕ್ ಲೀಚ್ ಅವರು ತಲಾ ಎರಡು ವಿಕೆಟ್ ಉರುಳಿಸಿದ್ರು.
ಇದೀಗ ಇಂಗ್ಲೆಂಡ್ ಎರಡನೇ ಇನಿಂಗ್ಸ್ ಆರಂಭಿಸಲಿದೆ. 241 ರನ್ ಗಳ ಮುನ್ನಡೆ ಪಡೆದುಕೊಂಡಿರುವ ಇಂಗ್ಲೆಂಡ್ ಬಿರುಸಿನ ಆಟವನ್ನಾಡುವ ಮೂಲಕ ಟೀಮ್ ಇಂಡಿಯಾದ ಮೇಲೆ ಒತ್ತಡ ಹೇರುವ ತಂತ್ರದಲ್ಲಿದೆ.
ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಗೆ ಅಶ್ವಿನ್ ಆರಂಭದಲ್ಲೇ ಆಘಾತ ನೀಡಿದ್ದಾರೆ. ಮೊದಲ ಎಸೆತದಲ್ಲೇ ಅಶ್ವಿನ್ ಅವರು ರೋರಿ ಬನ್ರ್ಸ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಚೆನ್ನೈ ಟೆಸ್ಟ್ ಪಂದ್ಯ ಬಹುತೇಕ ಡ್ರಾದತ್ತ ಸಾಗುತ್ತಿದೆ. ಆದ್ರೂ ಇಂಗ್ಲೆಂಡ್ ಬೌಲರ್ ಗಳು ಪರಿಣಾಮಕಾರಿಯಾದ್ರೆ ಟೀಮ್ ಇಂಡಿಯಾ ಸೋಲಿನ ಭೀತಿಗೆ ಸಿಲುಕುವ ಸಾಧ್ಯತೆ ಕೂಡ ಇದೆ. ಹಾಗೇ ಟೀಮ್ ಇಂಡಿಯಾದ ಬೌಲರ್ ಗಳು ಪರಿಣಾಮಕಾರಿಯಾದ್ರೆ ಗೆಲ್ಲುವ ಅವಕಾಶವೂ ಇದೆ. ಒಟ್ಟಿನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.