ದುಬೈನ ಹಾಟ್ ಕಂಡೀಷನ್ನಲ್ಲಿ ದಕ್ಷಿಣ ಭಾರತದ ಪ್ಲೇವರ್ ಎಲ್ಲೆಡೆ ವ್ಯಾಪಿಸಿತು. ಚೆನ್ನೈನ ಪೊಂಗಲ್ ರುಚಿ ಎದುರು ಬೆಂಗಾಲಿ ಸ್ವೀಟ್ಸ್ ಗೆಲ್ಲಲಿಲ್ಲ.
ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಚಾಣಾಕ್ಷತನಕ್ಕೆ ಕೆಕೆಆರ್ನ ಇಯಾನ್ ಮೊರ್ಗಾನ್ ಸಾಟಿಯಾಗಲಿಲ್ಲ.
ಚೆನ್ನೈ ಬೌಲರ್ಗಳು ಕೆಕೆಆರ್ ತಂಡವನ್ನು ಕಟ್ಟಿಹಾಕಿದರೆ, ಚೆನ್ನೈ ಬ್ಯಾಟ್ಸ್ಮನ್ಗಳು ದೊಡ್ಡ ಮೊತ್ತ ಸೇರಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು.
ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ 27 ರನ್ಗಳಿಂದ ಸೋತು ನಿರಾಸೆ ಅನುಭವಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ 4ನೇ ಬಾರಿ ಟ್ರೋಫಿ ಎತ್ತಿ ಸಂಭ್ರಮಿಸಿತು.
ಫೈನಲ್ ಪಂದ್ಯದ ಟಾಸ್ ಚೆನ್ನೈ ಕಡೆ ಮುಖಮಾಡಲಿಲ್ಲ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಚೇಸಿಂಗ್ ಡ್ರೀಮ್ನೊಂದಿಗೆ ಧೋನಿ ಬಳಗವನ್ನು ಬ್ಯಾಟಿಂಗ್ಗೆ ಇಳಿಸಿತು.
ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಎಂದಿನಂತೆ ಬಿರುಸಿನ ಆರಂಭ ತಂದುಕೊಟ್ಟಿತ್ತು.
ರುತುರಾಜ್ ಆರೇಂಜ್ ಕ್ಯಾಪ್ ಕೂಡ ತನ್ನ ದಾಗಿಸಿಕೊಂಡರು. ಮೊದಲ ವಿಕೆಟ್ಗೆ ಈ ಜೋಡಿ 61 ರನ್ಗಳ ಜೊತೆಯಾಟ ಆಡಿತ್ತು.
27 ಎಸೆತಗಳಲ್ಲಿ 3 ಫೋರ್ ಮತ್ತು 1 ಸಿಕ್ಸರ್ ನೆರವಿನಿಂದ 32 ರನ್ಗಳಿಸಿದ್ದ ರುತುರಾಜ್ ನರೈನ್ ಮೋಡಿಗೆ ಬಲಿಯಾದರು.
ಕ್ರೀಸ್ಗಿಳಿದ ರಾಬಿನ್ ಉತ್ತಪ್ಪ ಸ್ಪೋಟಕ ಆಟಕ್ಕೆ ಕೈ ಹಾಕಿದರು. ಮತ್ತೊಂದು ಕಡೆ ಫಾಫ್ ಕೂಡ ತನ್ನ ಕೆಲಸವನ್ನು ಮಾಡುತ್ತಿದ್ದರು.
ಅರ್ಧಶತಕದ ಗಡಿ ಕೂಡ ದಾಟಿದರು. ಉತ್ತಪ್ಪ ಬೆನ್ನು ಬೆನ್ನಿಗೆ 3 ಸಿಕ್ಸರ್ ಬಾರಿಸಿ ಫಾ್ಫ್ ಮೇಲಿನ ಒತ್ತಡ ಕಡಿಮೆ ಮಾಡಿದರು.
14ನೇ ಓವರ್ನಲ್ಲಿ ಉತ್ತಪ್ಪ ಔಟಾಗುವ ಮುನ್ನ 63 ರನ್ಗಳ ಜೊತೆಯಾಟ ಆಡಿದ್ದರು. ಉತ್ತಪ್ಪ ಕೇವಲ 15 ಎಸೆತಗಳಲ್ಲಿ 31 ರನ್ಗಳಿಸಿ ನಿರ್ಗಮಿಸಿದರು.
ಫಾಫ್ ಜೊತೆಗೆ ಇನ್ನಿಂಗ್ಸ್ ಕಟ್ಟಲು ಬಂದ ಮೊಯಿನ್ ಅಲಿಯೂ ಆಟವನ್ನು ನಿಧಾನಗೊಳಿಸಲಿಲ್ಲ. ಬೌಂಡರಿ, ಸಿಕ್ಸರ್ಗಳ ಮೂಲಕ ಅಬ್ಬರಿಸಿದರು.
ಫಾಫ್ ಕೂಡ ಸ್ಲಾಗ್ ಓವರ್ಗಳ ಲಾಭ ಪಡೆದು ತಂಡದ ರನ್ ರೇಟ್ ಹೆಚ್ಚಿಸಿದರು. ಈ ಜೋಡಿ 68 ರನ್ಗಳನ್ನು ಸೇರಿಸಿತು.
ಮೊಯಿನ್ ಅಲಿ 20 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2ಬೌಂಡರಿ ನೆರವಿನಿಂದ ಅಜೇಯ 37 ರನ್ಗಳಿಸಿದರು.
ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಔಟಾಗುವ ಮುನ್ನ ಫಾಫ್59 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 86 ರನ್ಗಳಿಸಿದ್ದರು. ಚೆನ್ನೈ 20 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 192ರನ್ಗಳಿಸಿತ್ತು.
ಚಾಂಪಿಯನ್ ಕನಸಿನೊಂದಿಗೆ ಕೆಕೆಆರ್ ಚೇಸಿಂಗ್ ಆರಂಭಿಸಿತು. ಖಾತೆ ತೆರೆಯುವ ಮುನ್ನವೇ ವೆಂಕಟೇಶ್ಅಯ್ಯರ್ ಧೋನಿಯಿಂದ ಜೀವದಾನ ಪಡೆದಿದ್ದರು.
ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಚೆನ್ನೈ ಬೌಲರ್ಗಳ ಎದೆ ನಡುಗಿಸಿದ್ದರು.
ಮೊದಲ ವಿಕೆಟ್ಗೆ ಈ ಜೋಡಿ 91 ರನ್ಗಳಿಸಿದ್ದಾಗ ಕೊಲ್ಕತ್ತಾ ಚಾಂಪಿಯನ್ ಆಗುವ ಕನಸು ಕಂಡಿತ್ತು.
ಚೆನ್ನೈ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಅಯ್ಯರ್ ಕೇವಲ 32 ಎಸೆತಗಳಲ್ಲಿ 5 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ 50 ರನ್ಗಳಿಸಿದ್ದರು.
ಬ್ರೇಕ್ ಪಡೆಯಲು ಪರದಾಡಿದ್ದ ಚೆನ್ನೈಗೆ ಶಾರ್ದೂಲ್ ಥಾಕೂರ್ ಮೊದಲ ವಿಕೆಟ್ ತಂದುಕೊಟ್ಟರು. ಡೇಂಜರಸ್ ಅಯ್ಯರ್ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದೇ ಓವರ್ನಲ್ಲಿ ನಿತೀಶ್ ರಾಣಾ ಕೂಡ ಔಟಾದರು. ಕೆಕೆಆರ್ ಕುಸಿತ ಆರಂಭವಾಗಿತ್ತು.
ಜೋಶ್ ಹ್ಯಾಜಲ್ವುಡ್ ನರೈನ್ ವಿಕೆಟ್ ಪಡೆದುಕೊಂಡರು. ಮತ್ತೊಂದು ಗಿಲ್ ಆಟ ವೇಗ ಪಡೆದುಕೊಂಡಿತ್ತು. 43 ಎಸೆತಗಳಲ್ಲಿ 51 ರನ್ ಸಿಡಿಸಿದ್ದ ಗಿಲ್ ದೀಪಕ್ ಚಹರ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಚೆನ್ನೈ ಐಪಿಎಲ್ ಕಪ್ ಮೇಲೆ ಒಂದು ಕೈ ಇಟ್ಟ ಫೀಲಿಂಗ್ನಲ್ಲಿತ್ತು. ಜಡೇಜಾ ದಿನೇಶ್ ಕಾರ್ತಿಕ್ ಮತ್ತು ಶಕೀಬ್ ಅಲ್ ಹಸನ್ರನ್ನು ಒಂದೇ ಓವರ್ನಲ್ಲಿ ಔಟ್ ಮಾಡಿದರು. ಕೆಕೆಆರ್ ಕಪ್ ಆಸೆ ಕರಗಿ ಹೋಗಿತ್ತು.
ಗಾಯಗೊಂಡಿದ್ದ ರಾಹುಲ್ ತ್ರಿಪಾಠಿ ಥಾಕೂರ್ಗೆ 3ನೇ ವಿಕೆಟ್ ಆಗಿ ಹೊರ ನಡೆದರು. ಇಯಾನ್ ಮೊರ್ಗಾನ್ ದೀಪಕ್ ಚಹರ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಹೊರ ನಡೆದರು.
91 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ 125 ರನ್ ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು.
ಕೊನೆಯಲ್ಲಿ ಶಿವಂ ಮಾವಿ ಮತ್ತು ಲೊಕಿ ಫರ್ಗ್ಯೂಸನ್ ಅಬ್ಬರಿಸಿದರೂ ಗೆಲುವು ದೂರವಾಗಿತ್ತು. 20 ಓವರುಗಳಲ್ಲಿ ಕೆಕೆಆರ್ 9 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತ್ತು.
27 ರನ್ಗಳ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಚಾಂಪಿಯನ್ ಆಗಿ ಮರೆದಾಡಿತು.