ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಚೇತನ್ ಶರ್ಮಾ ಆಯ್ಕೆ
ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಚೇತನ್ ಶರ್ಮಾ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿಯ ಐವರು ಸದಸ್ಯರಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಚೇತನ್ ಶರ್ಮಾ ಅವರಿಗೆ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆ ಒಲಿದು ಬಂತು.
ಹೀಗಾಗಿ ಕರ್ನಾಟಕದ ಹಾಗೂ ದಕ್ಷಿಣ ವಲಯದ ಪ್ರತಿನಿಧಿ ಸುನೀಲ್ ಜೋಶಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಈ ಹಿಂದೆ ಸುನೀಲ್ ಜೋಷಿ ಆಯ್ಕೆ ಸಮಿತಿಯ ಮುಖಸ್ಥರಾಗಿದ್ದರು.
ಚೇತನ್ ಶರ್ಮಾ ಜೊತೆ ಮಾಜಿ ಆಟಗಾರರಾದ ಅಬೆ ಕುರುವಿಲ್ಲಾ ಮತ್ತು ಒಡಿಸ್ಸಾದ ದೇಬಾಶಿಶ್ ಮೊಹಾಂತಿ ಅವರು ಹೊಸದಾಗಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಇನ್ನುಳಿದಂತೆ ಕೇಂದ್ರ ವಲಯದಿಂದ ಹರ್ವಿಂದರ್ ಸಿಂಗ್ ನೇಮಕಗೊಂಡಿದ್ದಾರೆ.
ಒಟ್ಟಿನಲ್ಲಿ ಆಯ್ಕೆ ಸಮಿತಿಯ ಐವರು ಸದಸ್ಯರು ಕೂಡ ಭಾರತದ ತಂಡದ ಬೌಲರ್ ಗಳು ಎಂಬುದು ಮತ್ತೊಂದು ವಿಶೇಷ.
ಚೇತನ್ ಶರ್ಮಾ ಅವರು ತನ್ನ 16ನೇ ಹರೆಯದಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್ ಮತ್ತು 18ನೇ ಹರೆಯದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಶರ್ಮಾ 23 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅದೇ ರೀತಿ ಸುನೀಲ್ ಜೋಶಿ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
2021ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಆಯ್ಕೆ ಮಾಡುವ ಸವಾಲು ಚೇತನ್ ಶರ್ಮಾಗೆ ಇದೆ.
ಬಿಸಿಸಿಐನ 89ನೇ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಹಾಗೇ ಚೇತನ್ ಶರ್ಮಾ ಅವರನ್ನು ಮುಖ್ಯಸ್ಥರಾಗಿ ನೇಮಕವಾಗಿರುವ ಬಗ್ಗೆಯೂ ಬಿಸಿಸಿಐ ಸ್ಪಷ್ಟನೆ ಕೊಟ್ಟಿದೆ.








