Chhattisgarh : ಕಾನ್ಸ್ಟೇಬಲ್ ಗೆ ರಸ್ತೆಯಲ್ಲಿ ದೊರಕಿತು 45 ಲಕ್ಷ, ಆಮೇಲೆ ಏನಾಯ್ತು ಗೊತ್ತಾ ?
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ (ರಾಯಪುರ) ಟ್ರಾಫಿಕ್ ಕಾನ್‌ಸ್ಟೆಬಲ್‌ಯೊಬ್ಬರು ತಮ್ಮ ಪ್ರಾಮಾಣಿಕ ನಡವಳಿಕೆಗಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ.ಗಳನ್ನು ಸ್ಥಳೀಯ ಠಾಣೆಗೆ ಹಸ್ತಾಂತರಿಸುವ ಮೂಲಕ ಪೊಲೀಸ್ ಇಲಾಖೆಗೆ ಗೌರವ ತಂದಿದ್ದಾರೆ.
ಟ್ರಾಫಿಕ್ ಕಾನ್‌ಸ್ಟೆಬಲ್ ನೀಲಂಬರ್ ಸಿನ್ಹಾ ಅವರು ಅತ್ಯಂತ ಪ್ರಾಮಾಣಿಕರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನವಾ ರಾಯಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾನಾ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಪತ್ತೆಯಾಗಿದೆ. ಅದರಲ್ಲಿ ಸುಮಾರು 45 ಲಕ್ಷ ರೂ.ಗಳಿರುವುದು ಗಮನಕ್ಕೆ ಬಂದ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿ ಸಿವಿಲ್ ಲೈನ್ ಪೊಲೀಸ್ ಠಾಣೆಗೆ ಬ್ಯಾಗ್ ಹಸ್ತಾಂತರಿಸಿದ್ದಾರೆ.
ನೀಲಾಂಬರ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಅವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈ ಹಣ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಸಿವಿಲ್ ಲೈನ್ಸ್ ಪೊಲೀಸರು ತಿಳಿಸಿದ್ದಾರೆ.