ವೈದ್ಯಕೀಯ ರಜೆಯ ಮೇಲಿದ್ದ ಎಸ್‌ಟಿಎಫ್ ಯೋಧನನ್ನ ಹತ್ಯೆ ಮಾಡಿದ ನಕ್ಸಲರು….
ತನ್ನ ಸ್ವಗ್ರಾಮದಲ್ಲಿ ಒಂದು ತಿಂಗಳ ಕಾಲ ವೈದ್ಯಕೀಯ ರಜೆ ಪಡೆದು ಚಿಕಿತ್ಸೆ ಪಡೆಯುತ್ತಿದ್ದ ಛತ್ತೀಸ್‌ಗಢ ಪೊಲೀಸ್ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) 26 ವರ್ಷದ ಜವಾನನನ್ನು ನಕ್ಸಲರು ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ರೆಡ್ಡಿ ರಸ್ತೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕತ್ತು ಹಿಸುಕಿ ಸಾಯಿಸುವ ಮೊದಲು ಪೊಲೀಸರನ್ನ ತೀವ್ರವಾಗಿ ಥಳಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮೃತ ಎಸ್‌ಟಿಎಫ್ ಜವಾನನನ್ನು ಅರ್ಜುನ್ ಕುಡಿಯಂ ಧನೋರಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ವೈದ್ಯಕೀಯ ರಜೆ ಪಡೆದು ಸ್ವಗ್ರಾಮದಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು.
ನಕ್ಸಲರು ಜವಾನನನ್ನು ಕೊಂದು ಆತನ ಶವವನ್ನು ರೆಡ್ಡಿ ರಸ್ತೆಯಲ್ಲಿ ಎಸೆದಿದ್ದಾರೆ. ಮಾವೋವಾದಿಗಳ ಗುಂಪಿನ ಸದಸ್ಯರು ಘಟನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕೆಲವು ಕರಪತ್ರಗಳನ್ನು ಹಂಚಿದ್ದಾರೆ. ಆದರೆ ಜವಾನ ಸ್ವತಃ ತಾನೇ ಸ್ಥಳಕ್ಕೆ ತಲುಪಿದ್ದಾನೋ ಅಥವಾ ನಕ್ಸಲರು ಅಪಹರಿಸಿದ್ದರೋ ಎನ್ನುವುದು ತನಿಖೆಯ ವಿಷಯವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ ಕುಡಿಯಮ್ ಅವರನ್ನು ಕತ್ತು ಹಿಸುಕಿ ಸಾಯಿಸುವ ಮೊದಲು ತೀವ್ರವಾಗಿ ಥಳಿಸಿರಬಹುದು. ಆದರೆ, ಅವರ ಸಾವಿನ ಹಿಂದಿನ ನಿಖರವಾದ ಕಾರಣ ಶವಪರೀಕ್ಷೆ ವರದಿಯಲ್ಲಿ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪರಾಧವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ .