ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ಲಾಕ್ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ‘ಕೇಂದ್ರ ಸರ್ಕಾರವು ಬಡವರನ್ನು ಅವರಷ್ಟಕ್ಕೆ ಬಿಟ್ಟುಬಿಟ್ಟಿದೆ’ ಎಂದು ಟೀಕಿಸಿದ್ದಾರೆ.
ಪ್ರಧಾನಿ ಭಾಷಣ ಬಳಿಕ ಟ್ವೀಟ್ ಮಾಡಿರುವ ಅವರು, ‘ಪ್ರಧಾನಿಯವರಿಗೂ ನಾವು ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತೇವೆ. ಲಾಕ್ಡೌನ್ ವಿಸ್ತರಿಸಬೇಕಾದ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ನಾವೆಲ್ಲರೂ ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸುತ್ತೇವೆ. ಹಣಕಾಸಿನ ನೆರವಿಗಾಗಿ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ವಿನಂತಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾರ್ಚ್ 25, 2020ರಂದು ರೂಪಿಸಿರುವ ಸಂಕಷ್ಟ ನಿಧಿಗೆ ಒಂದೇ ಒಂದು ರೂಪಾಯಿ ಸೇರಿಸಿಲ್ಲ. ರಘುರಾಮ್ ರಾಜನ್ರಿಂದ ಜೀನ್ ಡ್ರೇಜ್, ಪ್ರಭಾತ್ ಪಟ್ನಾಯಕ್ರಿಂದ ಅಭಿಜಿತ್ ಬ್ಯಾನರ್ಜಿ ಅವರವರೆಗೆ ಹಲವು ತಜ್ಞರು ನೀಡಿರುವ ಸಲಹೆಗಳಿಗೆ ಸರ್ಕಾರ ಕಿವುಡಾಗಿದೆ’ ಎಂದು ಚಿದಂಬರಂ ಕುಟುಕಿದ್ದಾರೆ .
ಇದರ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಚಿದಂಬರಂ, ’21+19 ದಿನಗಳ ಅವಧಿಯಲ್ಲಿ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಡವರನ್ನು ದೂಡಲಾಗಿದೆ. ಹೊಟ್ಟೆಹೊರೆಯುವುದು ಅವರಿಗೆ ದೊಡ್ಡ ಕಷ್ಟವಾಗಿದೆ. ಹಣ ಇದೆ, ದುಡ್ಡು ಇದೆ. ಆದರೆ ಸರ್ಕಾರವು ಹಣವನ್ನಾಗಲೀ, ಆಹಾರವನ್ನಾಗಲೀ ಬಿಡುಗಡೆ ಮಾಡುತ್ತಿಲ್ಲ. ನನ್ನ ಪ್ರೀತಿಯ ದೇಶವೇ ಅಳು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.








