ನವದೆಹಲಿ: ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶವನ್ನು ನೀಡಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನು ಈ ಸಂದೇಶವನ್ನು ತೀವ್ರವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು, “ಸಾಂಕೇತಿಕತೆ” ಮುಖ್ಯ. ಆದರೆ ಆಲೋಚನೆಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರವಾದ ಚಿಂತನೆಯೂ ಅಷ್ಟೇ ಮುಖ್ಯವಾಗಿದೆ ಎಂದು ಟ್ವಿಟ್ವರ್ ನಲ್ಲಿ ತಿರುಗೇಟು ನೀಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?

“ಲಾಕ್ ಡೌನ್ ನಿಂದಾಗಿ ಬಡವರು ಬೀದಿಗೆ ಬಂದಿದ್ದು, ಅವರಿಗೆ ಮೋದಿ ಅವರು ವಿಶೇಷ ಪ್ಯಾಕೇಜ್ ಮತ್ತು ಆರ್ಥಿಕ ಸಂಕಷ್ಟದಿಂದ ಹೊರಬರಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿವೆ. ನಾವು ನಿಮ್ಮ ಮನವಿಯಂತೆ ಏಪ್ರಿಲ್ 5ರಂದು ದೀಪ ಉರಿಸುತ್ತೇವೆ. ಅದಕ್ಕೆ ಪ್ರತಿಯಾಗಿ ನೀವು ನಮ್ಮ ಹಾಗೂ ಈ ದೇಶದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಮಾತನ್ನೂ ಕೇಳಿ ಎಂದು ಚಿದಂಬರಂ ಅವರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.








