ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿದ್ದು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಪಾಸಣೆಗೆ ಒಳಗಾಗಲಿಲ್ಲ. ಕೊರೊನಾ ವೈರಾಣು ಸೋಂಕು ಹರಡುವ ಭೀತಿಯಿಂದಾಗಿ ಆರೋಗ್ಯ ಇಲಾಖೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಯಂತ್ರ ಅಳವಡಿಸಿದೆ. ಸಿಬ್ಬಂದಿಯು, ಸೋಂಕಿತರನ್ನು ಪತ್ತೆ ಹಚ್ಚುವ ಇನ್ಫ್ರಾರೆಡ್ ಥರ್ಮಾಮೀಟರ್ ಯಂತ್ರ ಬಳಸುತ್ತಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಮುಖ್ಯಮಂತ್ರಿ ಅವರನ್ನು ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾದ್ದರು. ಆದರೆ, ವಿಶ್ರಾಂತಿ ಕೊಠಡಿಯಿಂದ ನೇರವಾಗಿ ಹೊರ ಬಂದ ಮುಖ್ಯಮಂತ್ರಿ ಪರೀಕ್ಷೆಗೆ ಒಳಗಾಗಲೇ ಇಲ್ಲ.
ಬಳಿಕ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಕೊರೊನಾ ವೈದ್ಯಕೀಯ ತಪಾಸಣೆ ನಡೆಸಲಾಯಿತು.









