ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಹಳ್ಳ ಕೊಳ್ಳಗಳೆಲ್ಲಾ ಮೈದುಂಬಿ ಹರಿಯುತ್ತಿವೆ. ಇತ್ತ ಗಾಳಿ ಸಹಿತ ಭಾರೀ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ನೆಲಕ್ಕೆ ಬಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಡೂರಿನ ಜಕ್ಕನಹಳ್ಳಿ ಬಳಿ ನಡೆದಿದೆ. ಪರಮೇಶ್ವರಪ್ಪ ಎಂಬುವವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಪ್ರವಾಹಕ್ಕೆ ಮೊದಲ ಬಲಿ ಇದಾಗಿದೆ.
ಇನ್ನೂ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಲವು ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಮಳೆ ರೌದ್ರ ಸ್ವರೂಪ ತಾಳಿದೆ. ತುಂಗಾ ನದಿಯು ಮೈದುಂಬಿ ಹರಿಯುತ್ತಿದ್ದು, ಗಾಂಧಿ ಮೈದಾನ ಜಲಾವೃತವಾಗಿದೆ.
ಇತ್ತ ಮಹಾಮಳೆಗೆ ಮಲ್ಗೋಡ್ ಸೇತುವೆ ಜಲಾವೃತವಾಗಿದ್ದು, ಬಾಳೆಹೊನ್ನೂರು-ಕಳಸ ಸಂಚಾರ ಬಂದ್ ಆಗಿದೆ. ಇನ್ನೂ ಅಲ್ಲಲ್ಲಿ ಗುಡ್ಡ ಕುಸಿತ , ಮರ ಕುಸಿತ ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 173 ಬಳಿ ಮರ ಕುಸಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಮೂಡಿಗೆರೆ-ಮಂಗಳೂರು ನಡುವೆ ಸಂಚಾರ ಸ್ಥಗಿತವಾಗಿದೆ. ಅಲ್ದೇ ಮೂಡಿಗೆರ, ಶೃಂಗೇರಿ ಭಾಗಗಳಲ್ಲಿ ಅಲ್ಲಲ್ಲಿ ವರುಣ ಅಬ್ಬರದಿಂದಾಗಿ ಮನೆಗಳಿಗೆ ಹಾನಿಯಾಗಿದೆ.








