ಮದುವೆ ಮಾಡಿಸಿದ್ದಕ್ಕೆ ಪುರೋಹಿತರ ವಿರುದ್ಧ ಕೇಸ್ ದಾಖಲು
ಶಿವಮೊಗ್ಗ: 33 ವರ್ಷ ಯುವಕನ ಜೊತೆ ಅಪ್ರಾಪ್ತ ಬಾಲಕಿಯನ್ನ ಮದುವೆ ಮಾಡಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಬಳಿ ನಡೆದಿದೆ.
ಫೆಬ್ರವರಿ 27 ರಂದು ಯಲ್ಲದಕೋಣೆಯ ನಿವಾಸಿ ರಮೇಶ್(33) ಜೊತೆ ಬಳ್ಳಾರಿ ಜಿಲ್ಲೆಯ ಕೊಡ್ಲಿಗಿ ತಾಲೂಕಿನ ಕರ್ನಾರ್ ಹಟ್ಟಿಯ 16 ವರ್ಷದ ಬಾಲಕಿಯ ಮದುವೆ ಮಾಡಲಾಗಿದೆ. ಈ ಸಂಬಂಧ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಆಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಲ್ಲದಕೋಣೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನಲೆ ಬಾಲ್ಯ ವಿವಾಹ ಕಾಯ್ದೆಯಡಿ ರಮೇಶ್ ತಾಯಿ ಹಾಗೂ ಬಾಲಕಿಯ ತಂದೆ-ತಾಯಿ ಮತ್ತು ಮದುವೆ ಮಾಡಿಸಿದ ಪುರೋಹಿತರ ವಿರುದ್ಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನನ್ವಯ ರಮೇಶ್ ಹಾಗೂ ಕುಟುಂಬದವರನ್ನು ಪೊಲೀಸರು ಬಂಧಿಸಿದ್ದಾರೆ.








