====ನ.28ಕ್ಕೆ ಖಾಸಗಿ ಶಾಲೆ ಸಭೆ ಕರೆದ ಸುರೇಶ್ ಕುಮಾರ್===
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದ ಖಾಸಗಿ-ಶಾಲಾ ಕಾಲೇಜುಗಳು ಬಂದ್ ಆಗಿದೆ. ಆದರೆ, ಲಾಕ್‍ಡೌನ್ ನಂತರ ಫೀಸ್ ಕಟ್ಟದ ಮಕ್ಕಳಿಗೆ ಇನ್ನು ಮುಂದೆ ಆನ್‍ಲೈನ್, ಆಫ್‍ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳು ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿವೆ.
ನವೆಂಬರ್ 30ರೊಳಗೆ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು. ಇಲ್ಲವಾದಲ್ಲಿ ಈಗ ನಡೆಯುತ್ತಿರುವ ಆನ್‍ಲೈನ್, ಆಫ್‍ಲೈನ್ ಕ್ಲಾಸ್ ಕಟ್ ಮಾಡುವುದಾಗಿ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಖಾಸಗಿ ಶಾಲೆಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಪ್ರಸಕ್ತ ಶೈಕ್ಷಣಿಕ ವರ್ಷ 1ನೇ ತರಗತಿಯಿಂದ 8ನೇ ತರಗತಿವರೆಗೆ ಯಾವುದೇ ಮಕ್ಕಳನ್ನು ಪರೀಕ್ಷೆ ನಡೆಸದೇ ಇದ್ದರೂ ಫೇಸ್ ಮಾಡುವಂತಿಲ್ಲ, ಪಾಸ್ ಮಾಡಿ ಮುಂದಿನ ತರಗತಿಗೆ ಪ್ರಮೋಟ್ ಮಾಡಬೇಕು ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆದೇಶವಿದ್ದರೂ ಕೂಡ ಶೇ.50ರಿಂದ 60ರಷ್ಟು ಮಕ್ಕಳು ದಾಖಲಾತಿ ಶುಲ್ಕ, ಪ್ರವೇಶ ಶುಲ್ಕ ಸೇರಿದಂತೆ ನಯಾಪೈಸೆ ಫೀಸ್ ಕಟ್ಟಿಲ್ಲ. ಇನ್ನೂ ಅನೇಕ ಮಕ್ಕಳ ಪೋಷಕರು ಕಳೆದ ವರ್ಷದ ಬಾಕಿ ಶುಲ್ಕ ಕಟ್ಟಿಲ್ಲ. ಆದರೆ, ಇವರೆಲ್ಲರಿಗೂ ಜೂನ್‍ನಿಂದ ಆನ್‍ಲೈನ್ ತರಗತಿ ನೀಡಲಾಗುತ್ತಿದೆ. ಆದರೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ದ್ವಂದ್ವ ಹೇಳಿಕೆ ಖಾಸಗಿ ಶಾಲೆಗಳಿಗೆ ಆಘಾತ ನೀಡಿದೆ. ಫೀಸ್ ಕಟ್ಟಿಲ್ಲ ಅಂದ್ರೂ ಮಕ್ಕಳನ್ನು ಮುಂದಿನ ತರಗತಿಗೆ ಪಾಸ್ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಇದರಿಂದ ಮಕ್ಕಳಲ್ಲಿ ಓದುವುದರ ಬಗ್ಗೆ ಅಸಡ್ಡೆ ಹೆಚ್ಚಾಗಲು ಕಾರಣವಾಗಿದೆ. ಯಾಕೆ ಫೀಸ್ ಕಟ್ಟಬೇಕು, ಹೇಗಿದ್ದರೂ ಪಾಸ್ ಆಗುತ್ತೇವಲ್ಲ ಎಂಬ ಭಾವನೆ ಬಂದಿದೆ ಎಂದಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಸಂಬಳ, ಖರ್ಚು-ವೆಚ್ಚ ಬಗ್ಗೆ ಯವುದೇ ಜವಾಬ್ದಾರಿ ಇಲ್ಲದೆ ಸರ್ಕಾರದ ದ್ವಂದ್ವ ಹೇಳಿಕೆ ಅತ್ಯಂತ ಖಂಡನೀಯ. ಜತೆಗೆ ಜೂನ್‍ನಿಂದ ಹಾಗೂ ಕಳೆದ ವರ್ಷದ ಶುಲ್ಕ ಕಟ್ಟದ ಮಕ್ಕಳಿಗೆ ನವೆಂಬರ್ 30ರಿಂದ ಆನ್‍ಲೈನ್ ಕ್ಲಾಸ್‍ಗಳನ್ನು ಬಂದ್ ಮಾಡಲು ತೀರ್ಮಾನ ತೆಗೆದುಕೊಂಡಿರುವುದಾಗಿ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಆನ್‍ಲೈನ್ ಕ್ಲಾಸ್‍ನಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಶಿಕ್ಷಕರ ಸಂಬಳ, ಖರ್ಚು ವೆಚ್ಚದ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನ ಹರಿಸಿಲ್ಲ. ಪೋಕಷರು ಪಠ್ಯಪುಸ್ತಕಗಳನ್ನೂ ಖರೀದಿ ಮಾಡಿಲ್ಲ. ಹೀಗಾಗಿ ಶಾಲೆಗಳನ್ನು ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
`ಖಾಸಗಿ’ ಬೆದರಿಕೆಗೆ ಮಣಿದ್ರಾ ಸಚಿವರು..!
ಶುಲ್ಕ ಕಟ್ಟದಿದ್ದರೆ ನ.30ರ ನಂತರ ಆನ್‍ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳು ಸರ್ಕಾರಕ್ಕೆ ಹಾಕಿದ ಬೆದರಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಣಿದಿದ್ದಾರೆ.
ಶುಲ್ಕ ಕಟ್ಟದೇ ಇದ್ರೂ ಪಾಸ್ ಮಾಡಿ ಎಂದು ಹೇಳಿದ್ದ ಸುರೇಶ್ ಕುಮಾರ್, ಆನ್‍ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿರುವ ಖಾಸಗಿ ಶಾಲೆಗಳ ಪ್ರತಿನಿಧಿಗಳ ಜತೆ ನ.28ರಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಸಚಿವರು, ಅನುಕೂಲ ಇದ್ದವರು ಫೀಸ್ ಕಟ್ಟಿ. ಫೀಸ್ ಕಟ್ಟಿದರೆ ಸಂಬಳ ಕೊಡಲು ಅನುಕೂಲವಾಗುತ್ತದೆ. ಈ ಸಂಬಂಧ ಬೆಂಗಳೂರಿಗೆ ಹೋದ ನಂತರ ಸಭೆ ನಡೆಸಲಾಗುವುದು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel