ಇಸ್ಲಾಮಾಬಾದ್, ಜೂನ್ 3 : ಚೀನಾ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ (ಸಿಪಿಇಸಿ) ಅಡಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತದ ಆಕ್ಷೇಪದ ನಡುವೆಯೂ 1,124 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಕೈಗೊಳ್ಳಲು ನಿರ್ಧರಿಸಿದೆ.
ಈ ಬಗ್ಗೆ ಖಾಸಗಿ ವಿದ್ಯುತ್ ಮತ್ತು ಮೂಲಸೌಕರ್ಯಗಳ ಮಂಡಳಿಯ (ಪಿಪಿಐಬಿ) 127ನೇ ಸಭೆಯಲ್ಲಿ ಪಾಕಿಸ್ತಾನದ ಇಂಧನ ಸಚಿವ ಒಮರ್ ಅಯೂಬ್ ಅಧ್ಯಕ್ಷತೆಯಲ್ಲಿ ಕೊಹಲ ಜಲ ವಿದ್ಯುತ್ ಯೋಜನೆ ವಿವರಗಳನ್ನು ಮಂಡಿಸಲಾಯಿತು.
ಸಭೆಯಲ್ಲಿ ಚೀನಾದ ತ್ರೀ ಗಾರ್ಗೆಸ್ ಕಾರ್ಪೋರೇಷನ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಿಪಿಐಬಿ ಅಧಿಕಾರಿಗಳ ನಡುವೆ ಈಗಾಗಲೇ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಉದ್ದೇಶಿತ ಯೋಜನೆಯಲ್ಲಿ ಝೆಲಂ ನದಿ ನೀರು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಪಾಕಿಸ್ತಾನದ ಗ್ರಾಹಕರಿಗೆ ವಾರ್ಷಿಕ 500 ಕೋಟಿ ಯೂನಿಟ್ ವಿದ್ಯುತ್ ಅನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.
ಈ ಯೋಜನೆಗೆ ಸುಮಾರು ₹18.03 ಸಾವಿರ ಕೋಟಿ (2.4 ಶತಕೋಟಿ ಡಾಲರ್) ಹೂಡಿಕೆ ಮಾಡಲು ನಿರ್ಧರಿಸಲಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಯೊಂದು ಹೂಡಿಕೆ ಮಾಡಿರುವ ಬೃಹತ್ ಪ್ರಮಾಣದ ಮೊತ್ತ ಇದಾಗಿದೆ.








