ಬೀಜಿಂಗ್, ಮೇ 28 : ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಮರು ಅಳತೆ ಮಾಡಲು ಚೀನಾ ತಂಡ ಆಗಮಿಸಿದೆ. ಚೀನಾದ ಅಳತೆ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8844.443 ಮೀಟರ್. ಅದು ನೇಪಾಳ ಮೇ 1 ರಂದು ಮಾಡಿದ್ದ ಅಳತೆಗಿಂತ ನಾಲ್ಕು ಮೀಟರ್ ಕಡಿಮೆ ಇದೆ.
ನೇಪಾಳ ಮಾಡಿದ ಸಮೀಕ್ಷೆಯಲ್ಲಿ ಸತ್ಯ ಇಲ್ಲ ಎಂದು ಚೀನಾ ಹೊಸ ಸಮೀಕ್ಷೆ ಕೈಗೊಂಡಿದ್ದು, ಮೌಂಟ್ ಎವರೆಸ್ಟ್ ನ ಮರು ಅಳತೆ ಮಾಡಲು ಆಗಮಿಸಿದೆ. 2015 ನೇ ಇಸವಿಯಲ್ಲಿ ನೇಪಾಳದಲ್ಲಿ ತೀವ್ರವಾದ ಭೂಕಂಪನವಾಗಿತ್ತು. 7.8 ತೀವ್ರತೆ ದಾಖಲಿಸಿದ್ದ ಆ ಭೂಕಂಪದಲ್ಲಿ ಎಂಟು ಸಾವಿರ ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು.
ಆ ಭೂಕಂಪದಿಂದ ಮೌಂಟ್ ಎವರೆಸ್ಟ್ ಶಿಖರದ ಎತ್ತರದ ಬಗ್ಗೆ ವೈಜ್ಞಾನಿಕ ಸಮುದಾಯದಲ್ಲಿ ಹಲವು ಸಂಶಯಗಳು ಹುಟ್ಟಿದ್ದವು. ಹಾಗಾಗಿ ಭಾರತ ಮೌಂಟ್ ಎವರೆಸ್ಟ್‌ನ್ನು ಮರು ಅಳತೆ ಮಾಡಲು ನೇಪಾಳಕ್ಕೆ ಸೂಚಿಸಿತ್ತು. ಅಲ್ಲದೇ ಭಾರತದ 250 ವರ್ಷ ಹಳೆಯ ಸರ್ವೇಕ್ಷಣಾ ಸಂಸ್ಥೆ ಸರ್ವೆ ಆಫ್ ಇಂಡಿಯಾ ಕೂಡ ಭಾರತ ಮತ್ತು ನೇಪಾಳ ಜಂಟಿಯಾಗಿ ಮೌಂಟ್ ಎವರೆಸ್ಟ್ ಮರು ಅಳತೆ ಮಾಡಬೇಕೆಂದು ಸಲಹೆ ನೀಡಿತ್ತು. ಆದರೆ ನೇಪಾಳ ಮಾತ್ರ ಮರು ಅಳತೆ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿತ್ತು.
ಈ ಮೊದಲು 1975 ಹಾಗೂ 2005ರಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಮರು ಅಳತೆ ಮಾಡಲಾಗಿದ್ದು, 8,848.13 ಮೀಟರ್ ಹಾಗೂ 8,844.43 ಮೀಟರ್ ಅಳತೆ ಇತ್ತು.








