ಜಪಾನ್ ಭಾರತವನ್ನು ಬೆಂಬಲಿಸಿದ ಬೆನ್ನಲ್ಲೇ ಗಸ್ತು ಹಡಗುಗಳನ್ನು ಗಡಿಯಲ್ಲಿ ನಿಯೋಜಿಸಿದ ಚೀನಾ
ಹೊಸದಿಲ್ಲಿ, ಜುಲೈ 4: ಜಪಾನ್ ಭಾರತವನ್ನು ಬೆಂಬಲಿಸಿದ ಮತ್ತು ಶಾಂತಿಯುತ ನಿರ್ಣಯಕ್ಕೆ ಕರೆ ನೀಡಿದ ಬಳಿಕ, ಮತ್ತು ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನಗಳಿಗೆ ನಮ್ಮ ವಿರೋಧವಿದೆ ಎಂಬ ಹೇಳಿಕೆಯ ಬೆನ್ನಲ್ಲೇ, ಚೀನಾವು ತನ್ನ ಗಸ್ತು ಹಡಗುಗಳನ್ನು ಜಪಾನಿನ ಗಡಿಯಲ್ಲಿ ನಿಯೋಜಿಸಿದೆ ಎಂದು ಜಪಾನ್ ನ ಕೋಸ್ಟ್ ಗಾರ್ಡ್ ಹೇಳಿದೆ. ಅಂತರರಾಷ್ಟ್ರೀಯ ವರದಿಗಳ ಪ್ರಕಾರ, ಚೀನಾದ ಎರಡು ಗಸ್ತು ಹಡಗುಗಳು ಪೂರ್ವ ಚೀನಾ ಸಮುದ್ರದಲ್ಲಿನ ಜಲಗಡಿಯನ್ನು ಪ್ರವೇಶಿಸಿವೆ. ಪೂರ್ವ ಚೀನಾ ಸಮುದ್ರ ಪ್ರದೇಶದ ಮೂಲಕ ಜಪಾನ್ ಸೆನ್ಕಾಕು ದ್ವೀಪಗಳ ಬಳಿ ಚೀನಾ ಹಡಗುಗಳು ಸಂಚರಿಸುತ್ತಿವೆ ಎಂದು ಜಪಾನ್ ಕರಾವಳಿ ಭದ್ರತಾ ಪಡೆಗಳು ಮಾಹಿತಿ ನೀಡಿದ್ದು, ಇದಲ್ಲದೆ ಅಲ್ಲಿದ್ದ ಜಪಾನ್ ನ ಮೀನುಗಾರಿಕೆ ದೋಣಿಯೊಂದನ್ನು ಚೀನಿ ಪಡೆಗಳು ಸಂಪರ್ಕಿಸಿವೆ ಎಂದು ತಿಳಿಸಿವೆ.
ಜಪಾನ್ ನ ಕೋಸ್ಟ್ ಗಾರ್ಡ್, ಚೀನಾದ ಹಡಗುಗಳು ಜಪಾನ್ ಜಲಗಡಿಯಲ್ಲಿ ಇಷ್ಟು ದೂರದವರೆಗೆ ಒಳನುಗ್ಗಿರುವುದು ಇಲ್ಲಿಯವರೆಗಿನ ಇತಿಹಾಸದಲ್ಲಿ ಇದೇ ಮೊದಲು ಎಂದು ತಿಳಿಸಿದ್ದು, ಇದು ಚೀನಾದ ಅತಿಕ್ರಮಣ ಬುದ್ಧಿಗೆ ಸಾಕ್ಷಿಯೆಂದು ಹೇಳಿದೆ.

ಇದು ಇಂಡೋ-ಪೆಸಿಫಿಕ್ ಸಮುದ್ರದಲ್ಲಿನ ಜನವಸತಿ ಇಲ್ಲದ ಸೆನ್ಕಾಕು / ಡಿಯೋಯು ದ್ವೀಪಗಳ ಮೇಲೆ ಚೀನಾ ಜಪಾನ್ ನಡುವೆ ನಡೆಯುತ್ತಿರುವ ವೈಷಮ್ಯವನ್ನು ಹೆಚ್ಚಿಸಿದೆ.
1972 ರಿಂದ ಜಪಾನ್ ಮತ್ತು ಚೀನಾ ನಡುವೆ ಹಿಂದು ಮಹಾಸಾಗರ ಮತ್ತು ಫೆಸಿಪಿಕ್ ಮಹಾಸಾಗರದಲ್ಲಿರುವ ಸೆನ್ಕಾಕು ಹಾಗೂ ಡಿಯಾಯು ದ್ವೀಪಗಳ ಬಗ್ಗೆ ಸಂಘರ್ಷ ನಡೆಯುತ್ತಿದ್ದು, ಏಪ್ರಿಲ್ ನಿಂದ, ಜಪಾನ್ ನ ಸೆನ್ಕಾಕು ದ್ವೀಪಗಳ ಬಳಿ ಕನಿಷ್ಠ 67 ಬಾರಿ ಚೀನೀ ಹಡಗುಗಳು ಅತಿಕ್ರಮಣ ಪ್ರವೇಶ ನಡೆಸಿವೆ ಎಂದು ವರದಿಯಾಗಿದೆ. ಜಪಾನ್ ಈಗಾಗಲೇ ತನ್ನ ಅತ್ಯಾಧುನಿಕ ಕ್ಷಿಪಣಿಗಳನ್ನು ಚೀನಾವನ್ನು ಎದುರಿಸಲು ತನ್ನ ಗಡಿಯಲ್ಲಿ ನಿಯೋಜಿಸಿದೆ.
ಚೀನಾದೊಂದಿಗೆ ಹಿಂದು ಮಹಾಸಾಗರ ಹಾಗೂ ಫೆಸಿಪಿಕ್ ಮಹಾಸಾಗರದಲ್ಲಿರುವ ಸೆನ್ಕಾಕು ಹಾಗೂ ಡಿಯಾಯು ದ್ವೀಪಗಳ ಬಗ್ಗೆ ಎರಡು ರಾಷ್ಟ್ರಗಳ ನಡುವೆ ಹಿಂದಿನಿಂದಲೂ ಅಂದರೆ 1972ರಿಂದಲೂ ವೈಷಮ್ಯವಿದೆ. ಜಪಾನ್ ಇತ್ತೀಚೆಗೆ ಸೆನ್ ಕಾಕು ದ್ವೀಪ ತನಗೆ ಸೇರಿದ್ದೆಂದು ಸ್ಪಷ್ಟವಾಗಿ ಚೀನಾಗೆ ತಿಳಿಸಲು ದ್ವೀಪದ ಹೆಸರನ್ನು ತೊನೊಶಿರೋ ಸೆನ್ಕಾಕು ಎಂಬ ಬದಲಾಯಿಸಿದೆ.








