ಚೀನಾದ ಮೇಲೆ ಪ್ರಕೃತಿಯ ಮುನಿಸು
ಬೀಜಿಂಗ್, ಜುಲೈ 13: ಚೀನಾ ಈ ದಿನಗಳಲ್ಲಿ ಪ್ರಕೃತಿಯ ವಿಕೋಪದಿಂದ ತತ್ತರಿಸುತ್ತಿದ್ದು, ದಕ್ಷಿಣ ಚೀನಾದಲ್ಲಿ ಸುರಿಯುತ್ತಿರುವ ಮಳೆಗೆ ಪ್ರವಾಹದ ಭೀತಿ ಉಂಟಾಗಿದ್ದರೆ, ಉತ್ತರ ಚೀನಾದಲ್ಲಿ ಟ್ಯಾಂಗ್‌ಶಾನ್ ನಲ್ಲಿ ಭೂಕಂಪವು ಸಂಭವಿಸಿದೆ.
ಬೀಜಿಂಗ್ ಮತ್ತು ಉತ್ತರ ಚೀನಾದ ಹೆಬೀ ಪ್ರಾಂತ್ಯದ ಟ್ಯಾಂಗ್‌ಶಾನ್ ಸೇರಿದಂತೆ ಹಲವಾರು ಪ್ರಾಂತ್ಯದಲ್ಲಿ ಭಾನುವಾರ ಭೂಕಂಪನದ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 5.1 .ತೀವ್ರತೆಯು ದಾಖಲಾಗಿದೆ.
ಬೀಜಿಂಗ್ ಸಮಯ ಬೆಳಿಗ್ಗೆ 6: 38 ಕ್ಕೆ ಭೂಕಂಪನವು ಸಂಭವಿಸಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ (ಸಿಎನ್‌ಸಿ) ತಿಳಿಸಿದೆ. ಭೂಕಂಪವನ್ನು 39.78 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 118.44 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ವಿಚಾರಣೆ ಮಾಡಲಾಗಿದ್ದು, ಭೂಕಂಪನವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಸಿಎನ್‌ಸಿ ತಿಳಿಸಿದೆ.

ಭೂಕಂಪದ ಕೇಂದ್ರ ಬಿಂದು ಗುಯೆ ಜಿಲ್ಲೆಯಾಗಿದ್ದು,
ಎರಡನೇ ಭೂಕಂಪನವು ಇದೇ ಜಿಲ್ಲೆಯಲ್ಲಿ ಅರ್ಧಗಂಟೆಗಳಲ್ಲಿ ಕಾಣಿಸಿಕೊಂಡಿದೆ. ಎರಡನೇ ಭೂಕಂಪವು ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಿಸಿದ್ದು ಯಾವುದೇ ಸಾವು ನೋವು ದಾಖಲಾದ ವರದಿಯಾಗಿಲ್ಲ.
ಭೂಕಂಪನದ ಅನುಭವ ಕಂಡು ಬಂದಿರುವ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ.
ತಾಂಗ್ಶಾನ್ ಪ್ರಾಂತ್ಯದಲ್ಲಿ 1976ರಲ್ಲಿ ಸಂಭವಿಸಿದ ಭೂಕಂಪದಲ್ಲಿ 240,000 ಮಂದಿ ಮೃತಪಟ್ಟಿದ್ದರು. ರಿಕ್ಟರ್ ಮಾಪಕದಲ್ಲಿ ತೀವ್ರತೆ 5.1 ಎಂದು ಕಂಡು ಬಂದಿತ್ತು.

ಈ ನಡುವೆ ದಕ್ಷಿಣ ಚೀನಾದ ಅನೇಕ ಪ್ರದೇಶಗಳಲ್ಲಿ ಸತತವಾಗಿ ಭಾರಿ ಮಳೆಯಾಗುತ್ತಿದ್ದು, 52 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. 4 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ದಕ್ಷಿಣ ಚೀನಾದ ಅನೇಕ ಪ್ರಾಂತ್ಯಗಳಲ್ಲಿ ನಿರಂತರವಾಗಿ ಭಾರಿ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಪ್ರವಾಹ ತಡೆಗಟ್ಟುವ ಪರಿಸ್ಥಿತಿ ನಿರ್ಣಾಯಕವಾಗಿದ್ದು, ಶನಿವಾರದ ನಾಲ್ಕು ಜಲವಿಜ್ಞಾನ ಕೇಂದ್ರಗಳ ನೀರಿನ ಮಟ್ಟವು 1998 ರ ಗರಿಷ್ಠ ಮಟ್ಟಕ್ಕಿಂತಲೂ ಹೆಚ್ಚಾಗಿದೆ. ಚೀನಾದ ಚಿಯಾಂಗ್ಕ್ಸಿ ಪ್ರಾಂತ್ಯದ ಪೊಯಾಂಘು ಸರೋವರ ಕಣಿವೆಯಲ್ಲಿ 52.1 ಲಕ್ಷ ಜನರು ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿದ್ದಾರೆ.








