ನಮ್ಮ ರಾಜ್ಯದಲ್ಲಿದೆ ಚೀನೀ ಪಿಎಲ್‌ಎ ಜೊತೆ ನೇರ ಸಂಪರ್ಕ ಹೊಂದಿರುವ ಕಂಪನಿ !!
ಬೆಂಗಳೂರು, ಜುಲೈ 19: ಲಡಾಖ್ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾ ವಿರುದ್ಧ ಹೆಚ್ಚಿನ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಆಲೋಚಿಸುತ್ತಿರುವುದರಿಂದ ಭದ್ರತಾ ಸಂಸ್ಥೆಗಳು ಚೀನಾದೊಂದಿಗೆ ನೇರ ಸಂಪರ್ಕ ಹೊಂದಿರುವ ಕಂಪನಿಗಳನ್ನು ಗುರುತಿಸಲು ಮುಂದಾಗಿದೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆ ನೇರ ಸಂಪರ್ಕ ಹೊಂದಿರುವ ಕಂಪನಿಗಳಲ್ಲಿ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್, ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್, ಹುವಾವೇ ಟೆಕ್ನಾಲಜೀಸ್ ಕಂಪನಿ ಲಿಮಿಟೆಡ್ ಮತ್ತು ಎಸ್‌ಐಸಿ ಮೋಟಾರ್ ಕಾರ್ಪೊರೇಶನ್ ಲಿಮಿಟೆಡ್ ಸೇರಿವೆ. ಈ ಪಟ್ಟಿಯಲ್ಲಿ ಕರ್ನಾಟಕದ ಕೊಪ್ಪಲ್ ಜಿಲ್ಲೆಯ ಕಬ್ಬಿಣದ ಅದಿರು ಪೆಲೆಟೈಸೇಶನ್ ಸೌಲಭ್ಯವನ್ನು ಹೊಂದಿರುವ ಕ್ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದ ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್ ಗ್ರೂಪ್ ಕಂಪನಿ ಲಿಮಿಟೆಡ್ ಕೂಡ ಸೇರಿದೆ.

ಕ್ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಈ ಕಂಪನಿಯನ್ನು ನಡೆಸಲಾಗುತ್ತಿದ್ದು, ಅಂದಾಜು 250 ಕೋಟಿ ರೂ. ಹೂಡಿಕೆಯೊಂದಿಗೆ ಇದು ಹೊಸ ಪೇಟೆಯ ಕೊಪ್ಪಳ ದಲ್ಲಿ ಕಾರ್ಯಾಚರಿಸುತ್ತಿದೆ. ಭಾರತ ಮತ್ತು ಚೀನಾ ನಡುವಿನ ಅತಿದೊಡ್ಡ ಜಂಟಿ ಯೋಜನೆ ಎನಿಸಿಕೊಂಡಿರುವ ಈ ಯೋಜನೆಯಲ್ಲಿ 0.8 ಮೆಟ್ರಿಕ್ ಟನ್ ಪರ್ ಆಯನಂ (ಎಂಟಿಪಿಎ) ಸಾಮರ್ಥ್ಯದ ಕಬ್ಬಿಣದ ಅದಿರನ್ನು ಉಂಡೆಗಳ ರೂಪಕ್ಕೆ ತಂದು ಅದನ್ನು ಚೀನಾಕ್ಕೆ ರಫ್ತುಮಾಡುವುದು ಈ ಕಂಪನಿಯ ಮುಖ್ಯ ಕಾರ್ಯವಾಗಿದೆ.
ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್ ಗ್ರೂಪ್ ಕಂಪನಿ ಲಿಮಿಟೆಡ್ ನ ಉತ್ಪಾದನಾ ವ್ಯವಸ್ಥೆ ಮತ್ತು ಅದರ ಅಧೀನ ಉದ್ಯಮಗಳು ಮತ್ತು ಚೀನೀ ಪಿಎಲ್‌ಎಯ ಜನರಲ್ ಲಾಜಿಸ್ಟಿಕ್ಸ್ ವಿಭಾಗದ ಸಂಸ್ಥೆಗಳಿಂದ ಸಂಯೋಜಿಸಲಾಗಿದೆ ಮತ್ತು ಅದಕ್ಕೆ ಸಂಬಂಧಿತ ಉದ್ಯಮ ಮತ್ತು ಸಂಸ್ಥೆಗಳನ್ನು ಮರುಸಂಘಟಿಸಿ ಈ ಕಂಪನಿಯನ್ನು ಆರಂಭಿಸಲಾಗಿದೆ. ಕರ್ನಾಟಕದ ಕೊಪ್ಪಲ್‌ನಲ್ಲಿ ಸ್ಥಾವರದಲ್ಲಿ ಹೂಡಿಕೆ ಮಾಡುವುದರ ಹೊರತಾಗಿ, ಇದು ಛತ್ತೀಸ್ಗಢದಲ್ಲಿ ಡಕ್ಟೈಲ್ ಕಬ್ಬಿಣದ ಪೈಪ್ ಉತ್ಪಾದನಾ ಘಟಕವನ್ನೂ ಹೊಂದಿದೆ. ಇದು ಜಿಹುವಾ ಗ್ರೂಪ್ ಕಂಪನಿ ಲಿಮಿಟೆಡ್‌ನೊಂದಿಗೆ ಸಂಪರ್ಕ ಹೊಂದಿದ್ದು, ಚೀನಾದ ಪಿಎಲ್‌ಎ ಮತ್ತು ಸಶಸ್ತ್ರ ಪೊಲೀಸ್ ಪಡೆಗೆ ಮಿಲಿಟರಿ ಸರಬರಾಜಿನ ಉತ್ಪಾದನಾ ನೆಲೆ ಮತ್ತು ಅಂತರರಾಷ್ಟ್ರೀಯ ಮಿಲಿಟರಿ ಯುದ್ಧಸಾಮಗ್ರಿ ಮಾರುಕಟ್ಟೆಯ ಮುಖ್ಯ ಖರೀದಿ ಮತ್ತು ಸಂಸ್ಕರಣಾ ನೆಲೆಯಾಗಿದೆ.

ಚೀನಾ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಗ್ರೂಪ್ ಕಾರ್ಪೊರೇಷನ್ (ಸಿಇಟಿಸಿ) ಜೂನ್ 2018 ರಲ್ಲಿ ಆಂಧ್ರಪ್ರದೇಶದಲ್ಲಿ 200 ಮೆಗಾವ್ಯಾಟ್ ಸೌರ ಫೋಟೋ-ವೋಲ್ಟಾಯಿಕ್ ಸೆಲ್ ಉತ್ಪಾದನಾ ಕೇಂದ್ರ ಆರಂಭಿಸಲು 46 ಮಿಲಿಯನ್ (320 ಕೋಟಿ ರೂ.) ಹೂಡಿಕೆಯನ್ನು ಮಾಡಿದೆ. ಇದು ಚೀನಾದ ಪ್ರಮುಖ ಮಿಲಿಟರಿ ಎಲೆಕ್ಟ್ರಾನಿಕ್ಸ್ ತಯಾರಕ ಕಂಪೆನಿಯಾಗಿದ್ದು, ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ಆಧಾರದ ಮೇಲೆ ಕಂಪನಿಯ ಹಲವಾರು ಅಂಗಸಂಸ್ಥೆಗಳಿಂದ ರಫ್ತು ಮಾಡುವುದನ್ನು ಅಮೆರಿಕ ಸರ್ಕಾರ ನಿರ್ಬಂಧಿಸಿದೆ. ಕಾನೂನುಬಾಹಿರ ರಫ್ತು ಪ್ರಕರಣಗಳಲ್ಲಿ ಭಾಗಿಯಾಗುವುದರ ಹೊರತಾಗಿ, ಕೆಲವು ಸಿಇಟಿಸಿ ನೌಕರರು ಅಮೆರಿಕದಲ್ಲಿ ಮಿಲಿಟರಿ ಗೂಡಚರ್ಯೆಗಾಗಿ ಶಿಕ್ಷೆಗೊಳಗಾಗಿದ್ದಾರೆ. ಕ್ಸಿನ್‌ಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಬಳಸುವ ತಂತ್ರಜ್ಞಾನವನ್ನು ಸಿಇಟಿಸಿ ಒದಗಿಸಿದೆ ಎಂಬ ಆರೋಪವೂ ಇದೆ.








