ಪ್ರಪಂಚದಾದ್ಯಂತ ಸೋಂಕು ಹರಡುವುದನ್ನು ತಡೆಯಬಹುದಾಗಿತ್ತು ಎಂದು ವಿಶ್ವದ ದೊಡ್ಡಣ್ಣ ಅಮೆರಿಕ, ಮೇಲಿಂದ ಮೇಲೆ ಚೀನಾದ ಮೇಲೆ ಕಿಡಿಕಾರುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ. ಎಚ್.ಒ) ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂದು ಆರೋಪಿಸಿದೆ. ಇದೀಗ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಜರ್ಮನಿಯ ಬೇಹು ವರದಿಯಲ್ಲಿ ಅಂಶಗಳಿದ್ದು, ಕೊರೊನಾ ಸೋಂಕಿನ ಗಂಭೀರತೆಯನ್ನು ಜಗತ್ತಿಗೆ ಮುಚ್ಚಿಡುವ ವಿಚಾರದಲ್ಲಿ ಡಬ್ಲ್ಯೂ.ಎಚ್.ಒ ಮೇಲೆ ಚೀನಾ ಒತ್ತಡ ಹೇರಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಜರ್ಮನಿಯ ಖ್ಯಾತ ಅಂತರ್ಜಾಲ ಮಾಧ್ಯಮ ‘ಡೆರ್ ಸ್ಪೀಜೆಲ್’ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ಕೊರೊನಾ ಸೋಂಕಿನ ಬಗೆಗಿನ ವರದಿಯನ್ನು ಮುಚ್ಚಿಡಲು ಚೀನಾ ಒತ್ತಡ ಹೇರಿತ್ತು ಎಂದು ಗುಪ್ತಚರ ಸಂಸ್ಥೆಯ ತನಿಖಾ ವರದಿಯನ್ನು ಬಹಿರಂಗ ಪಡಿಸಿದೆ.
ಕೊರೋನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂಬ ಅಂಶಗಳಿದ್ದ ವರದಿಯನ್ನು ಬಹಿರಂಗ ಪಡಿಸದಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ) ಮೇಲೆ ಒತ್ತಡ ಹೇರಿದ್ದರು ಎಂದು ಜರ್ಮನ್ ಗುಪ್ತಚರ ಸಂಸ್ಥೆ ಬಿ.ಎನ್.ಡಿ ಮಂಡಿಸಿರುವ ತನಿಖಾ ವರದಿಯಲ್ಲಿ ಉಲ್ಲೇಖವಿರುವುದಾಗಿ ಡೆರ್ ಸ್ಪೀಜೆಲ್ ವರದಿ ಮಾಡಿದೆ.
ಜನವರಿ 21ರಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ಮಾಡಿ ಕೊರೋನಾ ಸೋಂಕಿನ ವರದಿಯನ್ನು ಪ್ರಕಟಿಸದಂತೆ ಒತ್ತಡ ಹೇರಿದ್ದರು. ಚೀನಾದ ಒತ್ತಡದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸೋಂಕಿನ ಗಂಭೀರತೆಯ ಎಚ್ಚರಿಕೆಯನ್ನು 4 ರಿಂದ 6 ವಾರ ತಡವಾಗಿ ಪ್ರಕಟಿಸಿತು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ ಎಂದು ಡೆರ್ ಸ್ಪೀಜೆಲ್ ವರದಿ ಮಾಡಿದೆ.
ಆದರೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ) ಬಿ.ಎನ್.ಡಿ ವರದಿಯನ್ನು ನಿರಾಕರಿಸಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಡಬ್ಲ್ಯೂ.ಎಚ್.ಒ ಮುಖ್ಯಸ್ಥರು ಜನವರಿ 21ರಂದು ಯಾವುದೇ ಮಾತುಕತೆ ನಡೆಸಿಲ್ಲ. ಕೊರೋನಾ ಸೋಂಕಿನ ಬಗೆಗಿನ ವರದಿಯನ್ನು ಡಬ್ಲ್ಯೂ.ಎಚ್.ಒ ಜನವರಿ 20 ರಂದು ತಯಾರಿಸಿದ್ದು, ಜನವರಿ 22ರಂದು ಅಧಿಕೃತವಾಗಿ ಪ್ರಕಟಿಸಿದೆ. ಜನವರಿ 21ರಂದು ಜಿನ್ ಪಿಂಗ್ ಡಬ್ಲ್ಯೂ.ಎಚ್.ಒ ಮೇಲೆ ಒತ್ತಡ ಹೇರಿ, ಡಬ್ಲ್ಯೂ.ಎಚ್.ಒ ಒತ್ತಡಕ್ಕೆ ಮಣಿದಿದ್ದು ನಿಜವಾಗಿದ್ದರೆ ಜನವರಿ 22ರಂದು ವರದಿ ಪ್ರಕಟವಾಗುತ್ತಿರಲಿಲ್ಲ ಎಂದು ಹೇಳಿದೆ.