ಭೂತಾನ್ ನೊಂದಿಗೂ ಕ್ಯಾತೆ ತೆಗೆದ ಕುತಂತ್ರಿ ಚೀನಾ
ಹೊಸದಿಲ್ಲಿ, ಜುಲೈ 3. ಕುತಂತ್ರಿ ಚೀನಾ ಲಡಾಖ್ ಗಡಿಭಾಗದಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ ಬಳಿಕ ಸ್ನೇಹದ ಸೋಗು ಹಾಕಿಕೊಂಡು ನೇಪಾಳದ ಭೂಭಾಗಗಳನ್ನು ಕಬಳಿಸಿತ್ತು. ಇದೀಗ ಭಾರತದ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಲ್ಲಿ ಒಂದಾದ ಭೂತಾನ್‌ನೊಂದಿಗೆ ಹೊಸ ಗಡಿ ವಿವಾದವನ್ನು ಹುಟ್ಟು ಹಾಕಿದೆ.
ಭಾರತ ಮತ್ತು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಪುಟ್ಟ ರಾಷ್ಟ್ರ ಭೂತಾನ್ ನ ಪೂರ್ವ ಭಾಗದಲ್ಲಿರುವ ಟ್ರಾಶಿಗಾಂಗ್ ಜಿಲ್ಲೆಯ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯ (ಎಸ್‌ಡಬ್ಲ್ಯುಎಸ್) ಗೆ ಅನುದಾನ ನೀಡಿರುವುದನ್ನು ಚೀನಾ ಪ್ರಶ್ನಿಸಿದೆ.
ಜೂನ್ ಮೊದಲ ವಾರದಲ್ಲಿ ನಡೆದ ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿ (ಜಿಇಎಫ್) ನ ವಾಸ್ತವ ಸಭೆಯಲ್ಲಿ, ಭಾರತ ಮತ್ತು ಚೀನಾ ಗಡಿಯಲ್ಲಿರುವ ಪೂರ್ವ ಭೂತಾನ್‌ನ ಟ್ರಾಶಿಗಾಂಗ್ ಜಿಲ್ಲೆಯ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯ (ಎಸ್‌ಡಬ್ಲ್ಯುಎಸ್)ವು ವಿವಾದಾಸ್ಪದ ಪ್ರದೇಶವಾಗಿದ್ದು, ಇಲ್ಲಿ ವನ್ಯಜೀವಿ ಕೇಂದ್ರ ನಿರ್ಮಾಣ ಮಾಡಬಾರದು ಎಂದು ಚೀನಾ ವಿರೋಧ ವ್ಯಕ್ತಪಡಿಸಿದೆ.
ಪ್ರಪಂಚದ ಬಹುತೇಕ ರಾಷ್ಟ್ರಗಳು ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಹುಟ್ಟಿದ ಕೊರೊನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದರೆ, ಚೀನಾ ಮಾತ್ರ ತನ್ನ ನೆರೆ ರಾಷ್ಟ್ರಗಳ ಜೊತೆಗೆ ಕ್ಯಾತೆ ತೆಗೆಯುತ್ತಾ ತನ್ನ ಭೂಭಾಗವನ್ನು ವಿಸ್ತರಿಸುವಲ್ಲಿ ಗಮನಹರಿಸಿದೆ.