ವಿಚಿತ್ರ ಬೀಜಗಳನ್ನು ಕಳುಹಿಸಿ ಜನರನ್ನು ಭಯಭೀತರನ್ನಾಗಿಸಿರುವ ಚೀನಾ
ವಾಷಿಂಗ್ಟನ್, ಜುಲೈ 27: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಚೀನಾ ಈಗಾಗಲೇ ವಿಶ್ವದಾದ್ಯಂತ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಚೀನಾದ ಪ್ರತಿಯೊಂದು ನಡೆಯನ್ನೂ ಅನುಮಾನದಿಂದ ನೋಡಲಾಗುತ್ತಿದೆ. ಅದೇ ಸಮಯದಲ್ಲಿ, ಚೀನಾ ಜನರ ಮನೆಗಳಿಗೆ ವಿಚಿತ್ರ ಬೀಜಗಳನ್ನು ಕಳುಹಿಸುವ ಮೂಲಕ ಆತಂಕವನ್ನು ಹುಟ್ಟು ಹಾಕಿದೆ . ಜನರು ಈ ಬೀಜದ ಬಗ್ಗೆ ಭಯಭೀತರಾಗಿದ್ದಾರೆ ಮತ್ತು ಇದನ್ನು ಚೀನಾದ ಹೊಸ ಆಟವೆಂದು ಪರಿಗಣಿಸುತ್ತಿದ್ದಾರೆ.
ಅಮೆರಿಕಾದಲ್ಲಿನ ವರದಿಗಳಿಂದ ದೊರೆತ ಮಾಹಿತಿಯ ಪ್ರಕಾರ, ವರ್ಜೀನಿಯಾ, ಮೇರಿಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿಯಂತಹ ಮೆಟ್ರೋ ಪ್ರದೇಶಗಳಲ್ಲಿನ ಜನರ ಮನೆಗಳಿಗೆ ಈ ವಿಚಿತ್ರ ರೀತಿಯ ಬೀಜವನ್ನು ಕಳುಹಿಸಲಾಗುತ್ತಿದೆ. ಕೆಲವರು ಇದನ್ನು ಪೊಲೀಸರಿಗೆ ವರದಿ ಮಾಡಿದ್ದು, ಪೊಲೀಸರು ಈ ಬಗ್ಗೆ ವರ್ಜೀನಿಯಾ ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ
ಸ್ಥಳೀಯ ಜನರ ಪ್ರಕಾರ, ಬೀಜಗಳನ್ನು ಕಳುಹಿಸಿರುವ ಪ್ಯಾಕೆಟ್ ಮೇಲೆ ಚೀನಾ ಭಾಷೆಯನ್ನು ಬಳಸಲಾಗಿದೆ. ಇದು ಒಂದು ರೀತಿಯ ಅನುಮಾನಕ್ಕೆ ಎಡೆ ಮಾಡಿದ್ದು, ಅಂತಹ ಪ್ಯಾಕೆಟ್ ಪಡೆದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ತನಿಖಾ ಅಧಿಕಾರಿಗಳು ಈ ಬೀಜವು ಕೆಲವು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಅಥವಾ ಸೂಕ್ಷ್ಮ ವಸ್ತುವಾಗಿರಬಹುದು ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಯಾವುದೇ ಸಂದರ್ಭದಲ್ಲೂ ಅಲಕ್ಷ್ಯ ಮಾಡಬೇಡಿ ಮತ್ತು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ. ವಿಶ್ವಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗದಿಂದ ಅಮೆರಿಕ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಕೂಡ ಗಮನಾರ್ಹವಾಗಿದ್ದು, ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವ ಲಸಿಕೆ ತಯಾರಿಸಲು ಪ್ರಯತ್ನ ನಡೆಸುತ್ತಿರುವ ಸಮಯದಲ್ಲಿ ಚೀನಾ ಹೊಸದೊಂದು ಆಟವನ್ನು ಶುರು ಹಚ್ಚಿಕೊಂಡಿರುವ ಅನುಮಾನ ಕಾಡುತ್ತಿದೆ.
ಚೀನಾ ಭಾರತದಲ್ಲಿ ಕೂಡ ಇಂತಹ ವಿಚಿತ್ರ ರೀತಿಯ ಅನುಮಾನಾಸ್ಪದ ಅಥವಾ ಮಾದಕ ಬೀಜಗಳನ್ನು ಅಥವಾ ಇನ್ನಾವುದೇ ಗಂಭೀರ ಕೃತ್ಯವನ್ನು ಕೈಗೊಳ್ಳಬಹುದು ಎಂದು ಭಾರತೀಯ ಮೂಲದ ಖ್ಯಾತ ವೈದ್ಯಕೀಯ ತಜ್ಞರಾದ ವೈದ್ಯಕೀಯ ಅಧಿಕಾರಿ ಡಾ.ಸುರೇಶ್ ಗುಪ್ತಾ ಭಾರತೀಯ ಜನರಿಗೆ ಮನವಿ ಮಾಡಿದ್ದಾರೆ. ಭಾರತೀಯರು ಕೂಡ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯುವುದು ತಪ್ಪುತ್ತದೆ ಎಂದು ಅವರು ಹೇಳಿದ್ದಾರೆ.