ಎಲ್’ಎಸಿಯಿಂದ ಹಿಂದೆ ಸರಿಯದ ಚೀನಾ – ಭಾರತದಿಂದ 35 ಸಾವಿರ ಹೆಚ್ಚುವರಿ ಯೋಧರ ಜಮಾವಣೆ
ಹೊಸದಿಲ್ಲಿ, ಅಗಸ್ಟ್ 1: ಚೀನಾದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಚೀನಾದ ಸೈನಿಕರು ಹಿಂದೆ ಸರಿಯದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ಪೂರ್ವ ಲಡಾಖ್‌ನಲ್ಲಿ 35,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಸುಮಾರು ಮೂರು ತಿಂಗಳ ಗಡಿ ಉದ್ವಿಗ್ನತೆಯ ನಂತರ, ಹೆಚ್ಚಿನ ಘರ್ಷಣೆ ಸ್ಥಳಗಳಲ್ಲಿ ಸೈನ್ಯವನ್ನು ವಾಪಸ್ ಕರೆಯಿಸಿ ಕೊಳ್ಳಲಾಗುವುದು ಎಂದು ಎರಡೂ ಕಡೆಯವರು ಹೇಳಿದ್ದರು. ಆದಾಗ್ಯೂ, ಪ್ಯಾಂಗೊಂಗ್ ತ್ಸೊದಂತಹ ಸ್ಥಳಗಳಿಂದ ಚೀನಾದವರು ಇನ್ನೂ ಹಿಂದೆ ಸರಿಯದಿರುವ ಬಗ್ಗೆ ರಕ್ಷಣಾ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವಾರು ಹಂತದ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಎಲ್’ಎಸಿಯಿಂದ ಸೇನೆಯನ್ನು ವಾಪಸು ಕರೆಯಿಸಿಕೊಳ್ಳಲು ನಿರ್ಧರಿಸಲಾಯಿತು.

ಜೂನ್ 15-16 ರಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಮುಖಾಮುಖಿ ಹಿಂಸೆಯಲ್ಲಿ ಅಧಿಕಾರಿ ಸೇರಿದಂತೆ 20 ಭಾರತೀಯ ಸೇನಾ ಸೈನಿಕರು ಹುತಾತ್ಮರಾದ ನಂತರ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಏರಿತು. ಚೀನಾದ ಕಡೆಯಿಂದಲೂ ಸಾವುನೋವುಗಳು ಸಂಭವಿಸಿದ್ದರೂ, ಆ ಸಂಖ್ಯೆ ಸ್ಪಷ್ಟವಾಗಿಲ್ಲ.
ಅಂದಿನಿಂದ, ಭಾರತೀಯ ಸೇನೆಯು ಸಾವಿರಾರು ಹೆಚ್ಚುವರಿ ಸೈನಿಕರನ್ನು ಗಡಿಯುದ್ದಕ್ಕೂ ಫಾರ್ವರ್ಡ್ ಸ್ಥಳಗಳಿಗೆ ಕಳುಹಿಸಿದೆ.
ಭಾರತೀಯ ವಾಯುಪಡೆ (ಐಎಎಫ್) ತನ್ನ ಮುಂಚೂಣಿಯ ಸುಖೋಯ್ 30-ಎಂಕೆಐ, ಜಾಗ್ವಾರ್, ಮಿರಾಜ್ 2000 ವಿಮಾನಗಳು ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಘರ್ಷಣೆಗಳ ನಂತರ ಲೇಹ್ ಮತ್ತು ಶ್ರೀನಗರ ಸೇರಿದಂತೆ ಹಲವಾರು ಪ್ರಮುಖ ವಾಯುನೆಲೆಗಳಿಗೆ ಸ್ಥಳಾಂತರಿಸಿದೆ.
ಈ ವಾರದ ಆರಂಭದಲ್ಲಿ, ಭಾರತೀಯ ಸೇನೆಯು ಟಿ -90 ಯುದ್ಧ ಟ್ಯಾಂಕ್‌ಗಳ ಸ್ಕ್ವಾಡ್ರನ್ ಮತ್ತು ಪೂರ್ಣ ಸೈನ್ಯದ ದಳವನ್ನು ದೌಲತ್ ಬೇಗ್ ಓಲ್ಡಿ (ಡಿಬಿಒ) ನೆಲೆಯಲ್ಲಿ ನಿಯೋಜಿಸಿತ್ತು ಎಂದು ವರದಿಯಾಗಿದೆ.
ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಎಲ್‌ಎಸಿ ಉದ್ದಕ್ಕೂ ಅಕ್ಸಾಯ್ ಚಿನ್‌ನಲ್ಲಿ ಸುಮಾರು 50,000 ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.








