ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ತಾನು ಬದ್ಧ – ಪ್ರಧಾನಿ ಮೋದಿ ಭಾಷಣದ ಬಳಿಕ ಚೀನಾ ಪ್ರತಿಕ್ರಿಯೆ
ಬೀಜಿಂಗ್, ಅಗಸ್ಟ್ 18: ರಾಜತಾಂತ್ರಿಕ ಸಂಬಂಧಗಳ ಸುಧಾರಣೆಗೆ, ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಬೆಳವಣಿಗೆಯನ್ನು ಕಾಪಾಡಲು ಭಾರತದೊಂದಿಗೆ ಹೆಜ್ಜೆ ಹಾಕಲು ತಾನು ಸಿದ್ಧ ಎಂದು ಚೀನಾ ಸೋಮವಾರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರ ಭಾರತದ ಸಶಸ್ತ್ರ ಪಡೆಗಳು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವವರಿಗೆ ಸೂಕ್ತ ಉತ್ತರ ನೀಡಿದೆ ಎಂಬ ಹೇಳಿಕೆಗೆ ಪತ್ರಕರ್ತರು ನಿಮ್ಮ ಪ್ರತಿಕ್ರಿಯೆ ಏನು ಎಂದು ಚೀನಾದ ವಿದೇಶಾಂಗ ಸಚಿವಾಲಯವನ್ನು ಪ್ರಶ್ನಿಸಿದ್ದು, ಅದಕ್ಕೆ ಪ್ರತಿಕ್ರಿಯೆಯಾಗಿ ಚೀನಾದ ಈ ಹೇಳಿಕೆ ಬಂದಿದೆ.
ಪ್ರಧಾನಿ ಮೋದಿ ತಮ್ಮ 74 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ದೇಶದ ಸಾರ್ವಭೌಮತ್ವಕ್ಕೆ ಸವಾಲು ಹಾಕಿದವರಿಗೆ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡಿದೆ ಎಂದು ಹೇಳಿಕೆ ನೀಡಿದ್ದರು. ಎಲ್ಒಸಿ (ಲೈನ್ ಆಫ್ ಕಂಟ್ರೋಲ್) ನಿಂದ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ವರೆಗೆ, ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟರೆ, ಸಶಸ್ತ್ರ ಪಡೆಗಳು ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತವೆ ಎಂದು ಪ್ರಧಾನಿ ಮೋದಿ ಪಾಕಿಸ್ತಾನ ಮತ್ತು ಚೀನಾದ ಹೆಸರನ್ನು ಉಲ್ಲೇಖಿಸದೆ ತಮ್ಮಭಾಷಣದಲ್ಲಿ ಹೇಳಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಪ್ರಧಾನಿ ಮೋದಿಯವರ ಭಾಷಣವನ್ನು ನಾವು ಕೇಳಿಸಿಕೊಂಡಿದ್ದೇವೆ .
ನಾವು ನೆರೆಹೊರೆಯ ರಾಷ್ಟ್ರದವರು ಮತ್ತು ಒಂದು ಶತಕೋಟಿ ಜನಸಂಖ್ಯೆ ಇರುವ ದೇಶಗಳಾಗಿ ಹೊರಹೊಮ್ಮುತ್ತಿದ್ದೇವೆ. ಆದ್ದರಿಂದ ದ್ವಿಪಕ್ಷೀಯ ಸಂಬಂಧಗಳ ಉತ್ತಮ ಅಭಿವೃದ್ಧಿಯು ಉಭಯ ದೇಶಗಳ ಜನರ ಹಿತಾಸಕ್ತಿಗೆ ಮಾತ್ರವಲ್ಲದೆ ಸ್ಥಿರತೆ, ಶಾಂತಿ, ಸಮೃದ್ಧಿ ಮತ್ತು ಇಡೀ ಪ್ರಪಂಚಕ್ಕೂ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಉಭಯ ದೇಶಗಳು ದೀರ್ಘಕಾಲೀನ ಹಿತಾಸಕ್ತಿಗಳಿಗೆ ನೆರವಾಗುವುದರಿಂದ ಪರಸ್ಪರ ಗೌರವಿಸುವುದು ಮತ್ತು ಬೆಂಬಲಿಸುವುದು ಸರಿಯಾದ ಮಾರ್ಗವಾಗಿದೆ ಎಂದು ಝಾವೋ ಹೇಳಿದರು. ಆದ್ದರಿಂದ, ನಮ್ಮ ರಾಜತಾಂತ್ರಿಕ ಸಂಬಂಧದಲ್ಲಿ ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು, ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು, ಹಂತ ಹಂತದ ಪ್ರಾಯೋಗಿಕ ಸಹಕಾರವನ್ನು ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಬೆಳವಣಿಗೆಯನ್ನು ಕಾಪಾಡಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ವಕ್ತಾರರು ಹೇಳಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ದೇಶದ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಇಡೀ ದೇಶವು ಒಗ್ಗಟ್ಟಾಗಿದೆ. ಅದು ಭಯೋತ್ಪಾದನೆಯಾಗಿರಲಿ ಅಥವಾ ವಿಸ್ತರಣಾವಾದವಾಗಿರಲಿ, ಭಾರತವು ದೃಢ ನಿಶ್ಚಯದಿಂದ ಹೋರಾಡುತ್ತದೆ ಎಂದು ಹೇಳಿದ್ದರು.
ಜೂನ್ನಲ್ಲಿ ಪೂರ್ವ ಲಡಾಕ್ನಲ್ಲಿ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ, ಭಾರತದ ಸಾರ್ವಭೌಮತ್ವವನ್ನು ಗೌರವಿಸುವುದು ಅತ್ಯುನ್ನತವಾದುದು ಮತ್ತು ಈ ಸಂಕಲ್ಪವನ್ನು ಕಾಪಾಡಿಕೊಳ್ಳಲು ಅದರ ಧೈರ್ಯಶಾಲಿ ಯೋಧರು ಏನು ಮಾಡಬಹುದು ಎಂಬುದನ್ನು ಜಗತ್ತು ಲಡಾಕ್ನಲ್ಲಿ ನೋಡಿದೆ ಎಂದಿದ್ದರು. ಹಾಗೂ ಆ ಎಲ್ಲಾ ಧೈರ್ಯಶಾಲಿ ಯೋಧರನ್ನು ನಾನು ಕೆಂಪು ಕೋಟೆಯಿಂದ ವಂದಿಸುತ್ತೇನೆ ಎಂದು ಮೋದಿ ಹೇಳಿದ್ದರು.