ಚೀನಾದ ನವ ವಸಾಹತುಕರಣ ನೀತಿ ಭಾರತದ ಪಾಲಿಗೆ ಹೇಗೆ ಮಾರಕ ಗೊತ್ತಾ? ಡೆಟ್ ಟ್ರ್ಯಾಪ್ ಡಿಪ್ಲೋಮಸಿ ಎನ್ನುವ ಚೀನಿಯರ ಕುತಂತ್ರದ ಕಥೆಯಿದು:
ಚೀನಾ, ಈ ಪರಮ ನೀಚ ಕೃತ್ರಿಮ ವಂಚಕ ರಾಷ್ಟ್ರ ಈಗ ಯಾರಿಗೂ ಬೇಕಾಗಿಲ್ಲ. ಹಾಗಂತ ಚೀನಾದ ಮೇಲೆ ಸಹಾನುಭೂತಿ ತೋರಿಸುವ ಅಗತ್ಯವೇ ಇಲ್ಲ. ಚರಿತ್ರೆಯಿಂದಲೂ ಚೀನಿಯರು ನಂಬಿಕೆಗೆ ಅರ್ಹರಲ್ಲ ಅನ್ನುವುದು ಈಗ ಜಗತ್ತಿಗೇ ತಿಳಿದ ಸತ್ಯ. ಚೀನಿಯರು ಇಡೀ ಪ್ರಪಂಚವನ್ನು ಆಳುವ ಹುಂಬ ಮಹತ್ವಾಕಾಂಕ್ಷೆ ಮತ್ತು ವಿನಾಶಕಾರಿ ಸ್ವಾರ್ಥ ಹೊಂದಿರುವವರು. ಇದಕ್ಕಾಗಿ ಅವರು ಮನುಕುಲಕ್ಕೆ ಕೊಟ್ಟ ಮಹಾನ್ ಉಡುಗೊರೆಯೇ ಕೋವಿಡ್ -19. ಅದೆಲ್ಲಾ ಅತ್ತ ಇರಲಿ, ಚೀನಾ ಹೇಗೆ ನಮ್ಮ ಸಾರ್ವಭೌಮ ಭಾರತದ ಪಾಲಿನ ಸದಾ ಕಾಲದ ಮಗ್ಗುಲ ಮುಳ್ಳು ಎಂದು ಹೇಳಲು ಹೊರಟೆ, ಬಾಕಿ ವಿಚಾರ ಎಲ್ಲಾ ಪಕ್ಕಕ್ಕಿಡಿ ಚೀನಾ ಎನ್ನುವ ವಿಷಕಾರಿ ಡ್ರ್ಯಾಗನ್ ನಿಂದ ಭಾರತಕ್ಕೆ ಯಾವತ್ತೂ ಹೇಗೆ ಅಪಾಯ ಕಾದಿದೆ ಅಂತ ಗಮನಿಸೋಣ ಬನ್ನಿ.
ಡೆಟ್ ಟ್ರ್ಯಾಪ್ ಡಿಪ್ಲೊಮಸಿ ಅಥವಾ ಸಾಲದ ಸುಳಿಯ ರಾಜತಾಂತ್ರಿಕತೆ.. ಈ ತರಹದ್ದೊಂದು ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ಮಹಾನ್ ನಾಗರೀಕ. ವ್ಯವಸ್ಥೆ ಚೀನಾ. ಈ ಮಹಾಮೋಸದ ವಿಷವರ್ತುಲವನ್ನು ಅತ್ಯಂತ ಸರಳವಾಗಿ ಹೇಳುವುದಾದರೇ, ಹಿಂದೆಲ್ಲಾ ನಮ್ಮ ಸಮಾಜದಲ್ಲಿ ಪಾಳೇಗಾರಿಕೆ ದಬ್ಬಾಳಿಕೆಯ ಕಾಲದಲ್ಲಿ ಜಮೀನ್ದಾರಿ ಪದ್ಧತಿ ಅಂತೊಂದಿತ್ತು ನೆನಪಿದ್ಯಾ! ದುಡ್ಡಿನ ಧಣಿಯೊಬ್ಬ ಬಡವನೊಬ್ಬನಿಗೆ ಚಿಲ್ಲರೆ ಪುಡಿಗಾಸು ಸಾಲ ಕೊಟ್ಟು ಅವನ ಜಮೀನು ತನ್ನ ಹೆಸರಿಗೆ ಬರೆಸಿಕೊಂಡು ಕೊನೆಗೆ ಸಾಲ ತೀರುವ ತನಕ ಆ ಬಡವನನ್ನು ಜೀತಕ್ಕಿಟ್ಟುಕೊಳ್ಳುತ್ತಿದ್ದ ಅಮಾನವೀಯ ವ್ಯವಸ್ಥೆ. ಆ ಧಣಿ ಅಥವಾ ಜಮೀನುದಾರನಿಗೆ ಗೊತ್ತಿತ್ತು ಬಡವ ಸಾಲ ತೀರಿಸಲಾರ ಎಂದು, ಹಾಗಾಗೇ ಸಾಲ ಕೊಡುತ್ತಾನೆ. ಸಾಲದ ಜಾಲದಲ್ಲಿ ಬೀಳಿಸಿ ಅವನ ಜಮೀನು ನುಂಗುತ್ತಾನೆ ಸಾಲದ್ದಕ್ಕೆ ಬಡವ ಧಣಿಯ ಊಳಿಗದ ಆಳಾಗುತ್ತಾನೆ. ಈ ವ್ಯವಸ್ಥೆ ನೂರಾರು ವರ್ಷಗಳ ಕಾಲ ನಮ್ಮ ನಾಗರೀಕತೆಯಲ್ಲಿ ಹಾಸುಹೊಕ್ಕಾಗಿತ್ತಲ್ಲವೇ. ಎಕ್ಸಾಕ್ಟ್ಲೀ ದ ಸೇಮ್ ಗ್ಲೋಬಲ್ ಲೆವೆಲ್ ನಲ್ಲಿ ಮಾಡಹೊರಟಿದೆ ಚೀನಾ. ಇಲ್ಲಿ ಧಣಿ ಸ್ಥಾನದಲ್ಲಿ ಚೀನಾ ಕೂತಿದೆ. ಬಡ ಊಳಿಗದ ಆಳಾಗಿ ತೃತೀಯ ಜಗತ್ತಿನ ಬಡ ಹಾಗೂ ಮುಂದುವರೆಯಲು ಹವಣಿಸುತ್ತಿರುವ ರಾಷ್ಟ್ರಗಳಿವೆ.
ಈ ರಾಷ್ಟ್ರಗಳಿಗೆ ಸಾಲ ಕೊಟ್ಟ ಚೀನಾಗೆ ತಿಳಿದಿತ್ತು ಇವು ಖಂಡಿತಾ ಸಾಲ ತೀರಿಸುವಷ್ಟು ಶಕ್ತ್ಯವಲ್ಲ ಎಂದು. ಆದರೂ ಈ ಅಭಿವೃದ್ಧಿ ಹೀನ ಬಡ ರಾಷ್ಟ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ಹಣ ಹೂಡುತ್ತದೆ. ತೀರಿಸಲು ಸಾಧ್ಯವಿಲ್ಲದಷ್ಟು ಷರತ್ತು ಬಡ್ಡಿ ವಿಧಿಸುತ್ತದೆ. ನಂತರ ಆ ರಾಷ್ಟ್ರದ ಆಯಕಟ್ಟಿನ ಜಾಗವನ್ನು ನೂರಾರು ವರ್ಷ ಲೀಸ್ ಗೆ ಪಡೆದುಕೊಳ್ಳುತ್ತದೆ. ಆ ಆಯಕಟ್ಟಿನ ಜಾಗಗಳು ಬಹುತೇಕ ಬಂದರು ಅಥವಾ ತೀರ ಪ್ರದೇಶವೇ ಆಗಿರುತ್ತದೆ. ಸದ್ದಿಲ್ಲದೇ ಅಲ್ಲೊಂದು ನೌಕಾನೆಲೆ ಸ್ಥಾಪಿಸುತ್ತದೆ. ಆ ರಾಷ್ಟ್ರಗಳ ಏರ್ ಪೋರ್ಟ್, ಪ್ರಮುಖ ನಗರಗಳು, ಕೃಷಿ ಮತ್ತು ವಾಣಿಜ್ಯೋದ್ಯಮದ ಮೇಲೆ ಹಿಡಿತ ಸಾಧಿಸುತ್ತದೆ. ಅಲ್ಲೇನಾದರೂ ಅದಿರು, ಖನಿಜ, ಪೆಟ್ರೋಲಿಯಂ ನಿಕ್ಷೇಪಗಳಿದ್ದರೇ ಅಲ್ಲೂ ಹಣ ಹೂಡಿ ಅತಿಕ್ರಮಿಸಿಕೊಳ್ಳುತ್ತದೆ. ನಿಮಗೆ ಸಾಕ್ಷ್ಯ ಬೇಕಿದ್ದರೆ ಹತ್ತಾರು ಜೀವಂತ ಉದಾಹರಣೆಗಳಿವೆ.
ಈ ಡೆಟ್ ಟ್ರ್ಯಾಪ್ ಪಾಲಿಸಿ ಎನ್ನುವ ಚೀನಿಯರ ಬೈಲ್ಯಾಟರಲ್ ಟ್ರೇಡ್ ಅಗ್ರಿಮೆಂಟ್ ಮೂಲಕ ಸಾಧಿಸುತ್ತಿರುವ ಪಾರಮ್ಯದ ಷಡ್ಯಂತ್ರವನ್ನು ಜಗತ್ತಿಗೆ ಮೊತ್ತಮೊದಲ ಬಾರಿಗೆ ತಿಳಿಸಿಕೊಟ್ಟವರು ಭಾರತೀಯ ಬರಹಗಾರ ಬ್ರಹ್ಮ ಚೆಲ್ಲೇನಿ. 2010ರಲ್ಲೇ ಈ ಬಗ್ಗೆ ಸೂಚನೆ ನೀಡಿದ್ದ ಅವರು ಹೇಗೆ ಚೀನಾ ಏಷ್ಯಾದ ಬಡ ರಾಷ್ಟ್ರಗಳೊಟ್ಟಿಗೆ ಈ ಸಾಲದ ಸುಳಿಯ ಮೂಲಕ ಹಕ್ಕು ಸಾಧಿಸುತ್ತಿದೆ ಎನ್ನುವ ಮುನ್ಸೂಚನೆ ನೀಡಿದ್ದರು. 2018ರಲ್ಲಿ ಚೀನಾದ ಜಿಯೋ ಸ್ಟ್ರಾಟೆಜಿಕ್ ತಂತ್ರಗಾರಿಕೆಯ ಕುರಿತು ಕೂಲಂಕೂಷವಾಗಿ, ಹಾರ್ವರ್ಡ್ ಕೆನಡಿ ಸ್ಕೂಲ್ ನ ಅಧ್ಯಯನವೊಂದರಲ್ಲಿ ವರದಿ ತಯಾರಿಸಿದವರು ಸ್ಯಾಮ್ ಪಾರ್ಕರ್ ಹಾಗೂ ಗೇಬ್ರಿಯಲ್ ಚೆಫ್ಟೀಝ್. ಇದೇ ವಿಷಯದ ಕುರಿತಾಗಿ ಜಾನ್ಸ್ ಹಾಫ್ಕಿನ್ಸ್ ವಿಶ್ವವಿದ್ಯಾನಿಲಯದಿಂದಲೂ ರಿಸರ್ಚ್ ಪೇಪರ್ಸ್ ಪ್ರಕಟವಾಗಿದೆ.
2013-14ರಲ್ಲಿ ಟೋಂಗಾ ಅನ್ನುವ ಅತ್ಯಂತ ಬಡ ರಾಷ್ಟ್ರಕ್ಕೆ ಚೀನಾದ ಎಕ್ಸಿಮ್ ಬ್ಯಾಂಕ್ ಮೂಲ ಸೌಕರ್ಯಾಭಿವೃದ್ಧಿಗೆ ಸಾಲ ನೀಡಿತ್ತು. ಅದೂ ಎಷ್ಟು ಗೊತ್ತಾ? ಟೋಂಗಾದ ವಾರ್ಷಿಕ ಜಿಡಿಪಿಯ ಶೇ. 44%. ಅದ್ಯಾವುದೋ ದೂರದ ಆಫ್ರಿಕಾದ ಬಡ ರಾಷ್ಟ್ರವೊಂದಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ನೀಡುವಷ್ಟು ಧಾರಾಳಿಯಾ ಚೀನಾ? ನಂತರ ಚೀನಿಯರು ಟೋಂಗೋದ ಆಡಳಿತಕ್ಕೆ ಕೈ ಇಟ್ಟರು. ಈಗ ಅಲ್ಲಿನ ಪ್ರಾಕೃತಿಕ ಸಂಪನ್ಮೂಲ ಬೀಜಿಂಗ್ ವ್ಯವಹಾರದ ಸುಪರ್ದಿಯಲ್ಲಿದೆ.
ಚೀನಾ ಆಫ್ರಿಕಾ ಖಂಡದಲ್ಲಿ 2005ರಲ್ಲಿ ಸಾಲದ ರೂಪದಲ್ಲಿ ಹೂಡಿಕೆ ಮಾಡಿದ್ದು 2 ಬಿಲಿಯನ್ ಡಾಲರ್ 2016ರ ವೇಳೆಗೆ ಈ ಮೊತ್ತ 16 ಬಿಲಿಯನ್ ಡಾಲರ್ ಆಗಿತ್ತು. ಸದ್ಯ ಚೀನಾ ಸಾಲ ಕೊಟ್ಟಿರುವ ಪ್ರಮುಖ ಆಫ್ರಿಕಾ ರಾಷ್ಟ್ರಗಳೆಂದರೆ
ಅಂಗೋಲಾ (25 ಬಿಲಿಯನ್ ಡಾಲರ್) ಇಥಿಯೋಪಿಯಾ (13.5 ಬಿಲಿಯನ್ ಡಾಲರ್) ಜಾಂಬಿಯಾ (7.4 ಬಿಲಿಯನ್ ಡಾಲರ್) ರಿಪಬ್ಲಿಕ್ ಆಫ್ ಕೊಂಗೋ (7.3 ಬಿಲಿಯನ್ ಡಾಲರ್) ಉತ್ತರ ಸೂಡಾನ್ (6.4 ಬಿಲಿಯನ್ ಡಾಲರ್) 2006ರಿಂದ 2017ರ ವರೆಗೆ ಕೀನ್ಯಾಗೆ 9.8 ಬಿಲಿಯನ್ ಸಾಲ ಕೊಟ್ಟ ಚೀನಾ ನೈರೋಬಿಯ ರಸ್ತೆ ಅಭಿವೃದ್ಧಿ ಮಾಡುತ್ತೇನೆ ಎಂದು ಪೋರ್ಟ್ ಆಫ್ ಮೋಂಬಾಸ್ ಕೈವಶ ಮಾಡಿಕೊಂಡಿತು. ದಕ್ಷಿಣಾ ಆಫ್ರಿಕಾಗೆ ಚೈನೀಸ್ ಡೆವಲಪ್ಮೆಂಟ್ ಬ್ಯಾಂಕ್ 2.5 ಬಿಲಿಯನ್ ಡಾಲರ್ ಸಾಲ ಕೊಟ್ಟು ಅಲ್ಲೊಂದು ಚೀನಿಯರ ಧ್ವಜ ನೆಟ್ಟು ಬಂತು. ಇದೇ ತರಹ ನೈಜೀರಿಯಾ, ಜಿಬೋಟಿ, ಈಜಿಪ್ಟ್, ಲ್ಯಾಟೀನ್ ಅಮೇರಿಕಾದ ರಾಷ್ಟ್ರಗಳನ್ನೂ ಸಾಲದ ಶೂಲಕ್ಕೇರಿಸಿದೆ ಪಾಪಿ ಚೀನಾ. ಪ್ರತಿಫಲವಾಗಿ ಅರ್ಜಂಟೈನಾದಲ್ಲಿ ಚೀನಾದ ಸ್ಯಾಟಲೈಟ್ ಟ್ರಾಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಈಕ್ವೆಡಾರ್ ನಿಂದ ಶೇ.90ರಷ್ಟು ಕಚ್ಛಾ ತೈಲ ಚೀನಾ ಮಾರಾಟ ಮಾಡುತ್ತಿದೆ. ವೆನಿಜುವೆಲಾ ರಾಷ್ಟ್ರದಲ್ಲೂ ತನ್ನ ಹಕ್ಕು ಸಾಧಿಸಿ ಲಾಭ ಮಾಡಿಕೊಳ್ಳುತ್ತಿದೆ. ಇತ್ತ ಏಷ್ಯನ್ ರಾಷ್ಟ್ರಗಳ ವಿಚಾರಕ್ಕೆ ಬರುವುದಿದ್ದರೇ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಯನ್ಮಾರ್, ಶ್ರೀಲಂಕಾಗಳೂ ಚೀನಾದ ಈ ಟ್ರ್ಯಾಪ್ ಗೆ ಬಲಿಯಾಗಿವೆ. ಶ್ರೀಲಂಕಾದ ಮಗಂಪುರ ಮಹಿಂದ ರಾಜಪಕ್ಸೇ ಬಂದರು, ಮಟ್ಟಲ ರಾಜಪಕ್ಸೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಚೀನಿಯರ ವಶವಾಗಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಎಕ್ಸಿಮ್ ಬ್ಯಾಂಕ್ ನಿಂದ ಸಾಲ ಪಡೆದು ನಿರ್ಮಾಣವಾದ ಹಂಬಂಟೋಟಾ ತೀರಪ್ರದೇಶದಲ್ಲಿ ಚೀನಾದ ಬಂದೂಕು ಭಾರತದೆಡೆಗೆ ಮುಖ ಮಾಡಿ ನಿಂತಿದೆ.
ಚೀನಾದ ನವವಸಾಹತುಕರಣ ಇಷ್ಟಕ್ಕೆ ನಿಂತಿಲ್ಲ ಲಾವೊಸ್, ಇಂಡೋನೇಷಿಯಾ, ಮಲೇಶಿಯಾ, ಮಾಲ್ಡೀವ್ಸ್, ಮಂಗೋಲಿಯಾ, ಪಪೂವಾ ನ್ಯೂಗಿನಿ, ತಜಕಿಸ್ತಾನ್ ಗಳಿಗೂ ಚೀನಾ ಸಾಲವೆಂಬ ಷಡ್ಯಂತ್ರದಲ್ಲಿ ಬಂಧಿಸಿಟ್ಟಿದೆ. ಕೇವಲ ಆಫ್ರಿಕನ್ ರಾಷ್ಟ್ರಗಳು ಮಾತ್ರವಲ್ಲ ಕೆಲವು ಯುರೋಪಿಯನ್ ರಾಷ್ಟ್ರಗಳು ಮತ್ತು ತನ್ನ ಸುತ್ತಮುತ್ತಲಿರುವ ಏಷ್ಯನ್ ರಾಷ್ಟ್ರಗಳಿಗೂ ಚೀನಾ ಸಾಲ ಕೊಟ್ಟಿದೆ. 2013ರ ನಂತರ ಚೀನಾದ ಮಾರ್ಷಲ್ ಪ್ಲಾನ್ ಊಹಾತೀತವಾಗಿ ತನ್ನ ಕಬಂಧ ಬಾಹುಗಳನ್ನು ಚಾಚಿದೆ.
ಪಾಕಿಸ್ತಾನ ಅನ್ನುವ ಪರಮ ನೀಚ ರಾಷ್ಟ್ರದ ಜೊತೆ ಚೀನಾದ ವ್ಯವಹಾರ ನಿನ್ನೆ ಮೊನ್ನೆಯದ್ದಲ್ಲ. ಚೀನಾದಿಂದ ಪಾಕಿಸ್ತಾನಕ್ಕೆ ನೇರವಾಗಿ ಎಕಾನಾಮಿಕ್ ಎಕ್ಸ್ ಪ್ರೆಸ್ ಕಾರಿಡಾರ್ ರಸ್ತೆ ಯೋಜನೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅದೇ ಪಾಕಿಸ್ತಾನಕ್ಕೆ ತನ್ನ ಮಿಲಿಟರಿ ಸಹಕಾರ, ಶಸ್ತ್ರಾಸ್ತ್ರಗಳನ್ನು ಚೀನಾ ಪೂರೈಸುತ್ತಿರುವುದು ಹಾಗೂ ಅಲ್ಲಿನ ಭಯೋತ್ಪಾದಕ ಉಗ್ರ ಸಂಘಟನೆಗಳೊಂದಿಗೆ ನಿರಂತರವಾಗಿ ಮಾತುಕಥೆ ನಡೆಸುತ್ತಿರುವುದು ಯಾಕೆ ಗೊತ್ತಾ? ಶ್ರೀಲಂಕಾದ ತೀರದಲ್ಲಿ ನೌಕಾನೆಲೆ ಸ್ಥಾಪಿಸಿರುವುದು ಯಾಕೆ ಗೊತ್ತಾ? ಇತ್ತಾ ಬಾಂಗ್ಲಾ, ಮಯನ್ಮಾರ್ ಗಳಲ್ಲೂ ರಸ್ತೆ, ರೈಲು ಅಭಿವೃದ್ಧಿಗೆ ಹಣ ಹೂಡುತ್ತಿರುವುದು ಯಾಕೆ ಹೇಳಿ? ನೇಪಾಳವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿರುವ ಹಿಂದೆ ಇರುವ ಚೀನಾದ ಉದ್ದೇಶವೇನು ಗೊತ್ತಾ? ಭಾರತವನ್ನು ಎಲ್ಲಾ ದಿಕ್ಕಿನಿಂದ ಸುತ್ತುವರೆದು ಬಲಹೀನಗೊಳಿಸಿ ಪ್ರಾಬಲ್ಯ ಸಾಧಿಸುವುದೇ ಚೀನಾದ ರಹಸ್ಯ ತಂತ್ರಗಾರಿಕೆ.
ಹಾಗಂತ ಚೀನಾದ ಈ ನವ ವಸಾಹತುಶಾಹಿ ಧೋರಣೆ ಈಗ ರಹಸ್ಯವಾಗೇನೂ ಉಳಿದಿಲ್ಲ. ಏಷ್ಯಾ ಮತ್ತು ಆಫ್ರಿಕನ್ ಖಂಡಗಳಲ್ಲಿ ಚೀನಾ ನಡೆಸುತ್ತಿರುವ ಸಾಮ್ರಾಜ್ಯ ವಿಸ್ತೀರ್ಣ ಯೋಜನೆಗೆ ಆಫ್ರಿಕಾದ, ಯುರೋಪ್ ನ ಮತ್ತು ಭಾರತದ ಅಕಾಡೆಮಿಕ್ ವಲಯ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಕಾಲ ಬದಲಾದಂತೆ ಚೀನಾದ ಈ ಕುಟಿಲ ನೀತಿ ಮತ್ತಷ್ಟು ಜಟಿಲವಾಗುತ್ತಲೇ ಇದೆ. ಟಿಬೇಟ್ ಅನ್ನು ನುಂಗಿರುವ, ಹಾಂಗ್ ಕಾಂಗ್ ನುಂಗಲು ಸಮಯ ಕಾದಿರುವ ನೀಚ ಚೀನಿಯರು ಅತ್ತ ಮಂಗೋಲಿಯಾ ಮತ್ತು ಥೈವಾನ್ ಗಳ ಸುತ್ತಲೂ ಬಲೆ ಹಣೆಯುತ್ತಿದ್ದಾರೆ. ರಷ್ಯಾ ಮತ್ತು ಚೀನಾದ ಗಡಿಪ್ರದೇಶದಲ್ಲಿರುವ ರಷ್ಯನ್ನರ ವ್ಲಾಡಿವಸ್ಟೋಕ್ ನಗರ ತನ್ನದು ಎಂದು ರಚ್ಚೆ ಹಿಡಿದಿದೆ. ನೆನಪಿಡಿ ರಷ್ಯಾ ಇದೇ ಚೀನಿಯರ ಕಮ್ಯೂನಿಸ್ಟ್ ಸಂಗಾತಿ. ತನ್ನ ಮಿತ್ರನಿಗೆ ಎರಡು ಬಗೆಯುವ ಚೀನಾ ಇನ್ನು ಭಾರತದ ವಿಚಾರದಲ್ಲಿ ಹೇಗೆ ವರ್ತಿಸಬಹುದು.
ನೇಪಾಳದಲ್ಲಿ ಚೀನಾದ ದಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕೆಪಿ ಓಲಿ, ಚೀನಿಯರ ಮಾರ್ಷಲ್ ಗೇಮ್ ಗೆ ಅತ್ಯುತ್ತಮ ಉದಾಹರಣೆ. ನೇಪಾಳ ಗಡಿಯ ರೂಯಿ ಎಂಬ ಹಳ್ಳಿಯನ್ನು ಚೀನಿಯರು ನುಂಗಿದ್ದಾರೆ. ಹೀಗಾಗಿ ಸದ್ಯ ಕೆಪಿ ಓಲಿಯ ಖುರ್ಚಿ ತೂಗಾಡುತ್ತಿದೆಯಾದ್ರೂ ನಾಳೆ ಅವನ ಬದಲಿಗೆ ಮತ್ತೊಬ್ಬ ಕಮ್ಯೂನಿಸ್ಟ್ ನಾಯಕ ಪುಷ್ಪ ಕಮಲ್ ದಹಲ್ ಅಥವಾ ಪ್ರಚಂಡ ಅಧಿಕಾರಕ್ಕೆ ಬಂದರೂ ಅವನು ಸಹ ಚೀನಿಯರ ಬೂಟು ನೆಕ್ಕುವ ಅಸಾಮಿಯೇ. ಇತ್ತ ತನ್ನ ಗಡಿಭಾಗದಲ್ಲಿರುವ ಭೂತಾನ್ ನ ಸೆಕ್ಟೆಂಗ್ ಅಭಯಾರಣ್ಯದ ಪೂರ್ವ, ಪಶ್ಚಿಮ ಮತ್ತು ಕೇಂದ್ರ ಭಾಗ ತನ್ನದು ಎಂದು ಚೀನಾ ವಾಧಿಸುತ್ತಿದೆ. ಹಾಂಗ್ ಕಾಂಗ್ ಮತ್ತು ಮಂಗೋಲಿಯಾಗಳು ತನ್ನದೇ ಪ್ರದೇಶ ಎಂದು ಚೀನಾ ಬೊಬ್ಬೆ ಹೊಡೆಯುತ್ತಿರುವುದು ಇದೇ ಮೊದಲೇನಲ್ಲ. 1970ರಿಂದಲೂ ಜಪಾನ್ ನ ಸೆಂಕಾಕು ದ್ವೀಪವನ್ನು ತನ್ನದೆಂದು ಚೀನಾ ವಾಧಿಸುತ್ತಲೇ ಬಂದಿದೆ. ಇನ್ನೂ ಥೈವಾನ್ ಸಹ ಅನಾಧಿಕಾಲದಿಂದಲೂ ಚೀನಾದ ಭೂಮಿಯೇ ಎಂದು ಚೀನಾ ಉಸುರುತ್ತಿರುವುದು ಸಹ ಹೊಸತೇನಲ್ಲ.
ಚೀನಾದ ಈ ಗುಳ್ಳೆ ನರಿ ಬುದ್ದಿ, ವಂಚಕ ಪ್ರವೃತ್ತಿ, ಬಣ್ಣ ಬದಲಾಯಿಸುವ ಗೊಸಂಬೆತನ ವಿಶ್ವದ ಪ್ರತೀ ರಾಷ್ಟ್ರಗಳಿಗೂ ಅಪಾಯ ತಂದಿಡುವುದರಲ್ಲಿ ಅನುಮಾನವೇ ಇಲ್ಲ. ಚೀನಾ ಜಗತ್ತಿನ ಯಾವ ರಾಷ್ಟ್ರಗಳನ್ನೂ ನೆಮ್ಮದಿಯಾಗಿಡುವುದಿಲ್ಲ. ಆದರೆ ಮುಖ್ಯವಾಗಿ ಚೀನಾದಿಂದ ಅತಿ ದೊಡ್ಡ ಅಪಾಯ ಕಾದಿರುವುದು ಮಾತ್ರ ಸಾರ್ವಭೌಮ ಭಾರತಕ್ಕೆ. ಚೀನಾದ ಕುರಿತಾದ ನಮ್ಮ ರಾಜತಾಂತ್ರಿಕ ನಿಲುವು ಇನ್ನಷ್ಟು ಕಠಿಣವಾಗದಿದ್ದರೆ ಭವಿಷ್ಯದಲ್ಲಿ ಭಾರತ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
-ವಿಭಾ (ವಿಶ್ವಾಸ್ ಭಾರದ್ವಾಜ್)