ಗಾಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿದ ಚೀನಾ ಪಡೆ
ಹೊಸದಿಲ್ಲಿ, ಜುಲೈ 6: ಚೀನೀ ಪಡೆಗಳು ಪೂರ್ವ ಲಡಾಖ್ ನ ಗಾಲ್ವಾನ್ ವ್ಯಾಲಿ ಪ್ರದೇಶದಿಂದ ಹಿಂದೆ ಸರಿದಿದೆ. ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಜೂನ್ 15 ರಂದು ನಡೆದ ಸಂಘರ್ಷದ ನಂತರ ಮೊದಲ ಬಾರಿ ಚೀನಾ ಸೇನೆ ವಿವಾದಿತ ಜಾಗದಿಂದ ಹಿಂದಕ್ಕೆ ಸರಿದಿದೆ. ಆದಾಗ್ಯೂ, ಭಾರತೀಯ ಸೇನೆಯು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಗಾಲ್ವಾನ್ ಕಣಿವೆಯ ಕೆಲವು ಆಳವಾದ ಪ್ರದೇಶಗಳಲ್ಲಿ ಚೀನಾದ ಭಾರೀ ಶಸ್ತ್ರಸಜ್ಜಿತ ವಾಹನಗಳು ಇನ್ನೂ ಇದೆ ಎಂದು ಹೇಳಿದೆ.
ಜೂನ್ 30 ರಂದು ನಡೆದ ಮಿಲಿಟರಿ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಿದಂತೆ ಇದರ ಮೊದಲ ಹಂತವಾಗಿ ವಿವಾದಿತ ಪ್ರದೇಶದಿಂದ ಚೀನಾ ಸುಮಾರು 1 ರಿಂದ 2 ಕಿ.ಮೀ ನಷ್ಚು ಹಿಂದಕ್ಕೆ ಸರಿದಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತಮ್ಮ ಡೇರೆಗಳು, ವಾಹನಗಳು ಮತ್ತು ಪಡೆಗಳನ್ನು ಸ್ಥಳದಿಂದ ಒಂದರಿಂದ ಎರಡು ಕಿಲೋಮೀಟರ್‌ಗಳಷ್ಟು ಹಿಂದಕ್ಕೆ
ಸ್ಥಳಾಂತರ ಮಾಡಿದೆ.

ಎರಡೂ ಕಡೆಯಿಂದ ತಾತ್ಕಾಲಿಕ ಕ್ಯಾಂಪ್ ಗಳನ್ನು ತೆಗೆದುಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬದಲಾವಣೆಯ ತನಿಖೆ ನಡೆಸಲು ಭೌತಿಕ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಭಯ ದೇಶಗಳ ಸೇನೆಗಳ ನಡುವೆ ಸಂಘರ್ಷದ ಸ್ಥಿತಿ ಉಂಟಾಗಿದ್ದ ಹಿನ್ನಲೆಯಲ್ಲಿ ಜೂನ್ 6 ರಂದು ಉಭಯ ಸೇನೆಗಳು ಹಿಂದೆ ಸರಿಯಲು ಒಪ್ಪಿಗೆ ನೀಡಿದ್ದರೂ ಕೂಡ, ಚೀನಾ ಅದನ್ನು ಉಲ್ಲಂಘಿಸಿತ್ತು. ಈ ಹಿನ್ನೆಲೆಯಲ್ಲಿ, ಜೂನ್ 15 ರಂದು ಉಭಯ ಸೇನೆಗಳ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು ಮತ್ತು ಚೀನಾ ಘರ್ಷಣೆಯಲ್ಲಿ ಸಂಭವಿಸಿದ ಸಾವುನೋವುಗಳ ಸಂಖ್ಯೆಯನ್ನು ಬಹಿರಂಗ ಪಡಿಸಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಡಾಖ್‌ನಲ್ಲಿ ಸೈನಿಕರನ್ನು ಭೇಟಿ ನೀಡಿದ ನಂತರ ಚೀನಾ ಪಡೆಗಳು ಹಿಂದಕ್ಕೆ ಸರಿಯುವ ಸುದ್ದಿ ಬಂದಿದ್ದು, “ಭಾರತದ ಶತ್ರುಗಳು ನಿಮ್ಮ ಶೌರ್ಯ ಮತ್ತು ಕೋಪವನ್ನು ನೋಡಿದ್ದಾರೆ” ಎಂದು ಸೈನಿಕರ ಸೇವೆಗಾಗಿ ಧನ್ಯವಾದಗಳನ್ನು ಹೇಳಿದ್ದರು.








